*ಗೋಣಿಕೊಪ್ಪ, ಆ. 19: ವೀರ ಮರಣವನ್ನಪ್ಪಿದ ಯೋಧನ ಸ್ಮಾರಕದ ಮೇಲೆ ಆನೆ ಧಾಳಿ ನಡೆಸಿದ ಘಟನೆಯಿಂದ ಯೋಧನ ತಾಯಿ ದು:ಖಕ್ಕೊಳಗಾಗಿ ಜಿಲ್ಲಾ ಪಂಚಾಯತ್ ಸದಸ್ಯರ ಮನೆಯ ಕದತಟ್ಟಿ ಮಗನ ಸ್ಮಾರಕಕ್ಕೆ ರಕ್ಷಣೆ ನೀಡಬೇಕೆಂದು ಕಣ್ಣೀರು ಸುರಿಸಿದ ಘಟನೆ ನಡೆದಿದೆ.

2007ರಲ್ಲಿ ಸೇವೆಯಲ್ಲಿದ್ದಾಗ ಹವಲ್ದಾರ್ ಲೋಕೇಶ್ ನಿಧಿ ವೀರಮರಣವನ್ನಪ್ಪಿದ್ದರು. ಅವರ ತಾಯಿ ಜಯಲಕ್ಷ್ಮಿ ಸೀಗೆತೋಡುವಿನ ತಮ್ಮ ಕಾಫಿ ತೋಟದಲ್ಲಿ ಸ್ಮಾರಕ ನಿರ್ಮಿಸಿದ್ದರು. ಪ್ರತಿ ನಿತ್ಯ ದೀಪ ಬೆಳಗಿಸಿ ಮಗನ ಆತ್ಮಕ್ಕೆ ಶಾಂತಿ ಕೋರುತ್ತಿದ್ದ ತಾಯಿಗೆ ಕೆಲ ದಿನಗಳಿಂದ ಆನೆಯ ಉಪಟಳದಿಂದ ಮಗನ ಸ್ಮಾರಕಕ್ಕೆ ಹಾನಿ ಉಂಟಾಗುತ್ತಿರುವದು ಆಘಾತ ಉಂಟುಮಾಡಿದೆ.

ಆನೆಯ ಧಾಳಿಗೆ ಒಳಗಾಗುತ್ತಿರುವ ಸ್ಮಾರಕವನ್ನು ರಕ್ಷಿಸಿ ಕೊಡಿ ಎಂದು ತಾಯಿ ಜಯಲಕ್ಷ್ಮಿ ಜಿ.ಪಂ. ಸದಸ್ಯ ಸಿ.ಕೆ ಬೋಪಣ್ಣ ಅವರಲ್ಲಿ ಬೇಡಿಕೆ ಇಟ್ಟರು. ಇದಕ್ಕೆ ಸ್ಪಂದಿಸಿದ ಸಿ.ಕೆ. ಬೋಪಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಮಾರಕದ ಸುತ್ತ ಭದ್ರತೆಯನ್ನು ಒದಗಿಸಲು ರೈಲ್ವೆ ಕಂಬಿಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವದು. ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸುವದಾಗಿ ಮತ್ತು ಆನೆ ಧಾಳಿಯಿಂದ ಹಾನಿಯುಂಟಾದ ಸ್ಮಾರಕವನ್ನು ಸರಿಪಡಿಸಲು ಮುಂದಾಗುವದಾಗಿ ತಿಳಿಸಿದರು.

ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯರಾದ ರಾಮಕೃಷ್ಣ, ಸುರೇಶ್ ರೈ, ರತಿ ಅಚ್ಚಪ್ಪ, ಮಾಜಿ ತಾ.ಪಂ. ಅಧ್ಯಕ್ಷರುಗಳಾದ ವಿ.ಎ. ವೆಂಕಟೇಶ್, ರಾಣಿ ನಾರಾಯಣ್, ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಶರತ್ ಕಾಂತ್ ಹಾಜರಿದ್ದರು.