ಸೋಮವಾರಪೇಟೆ, ಆ.3: ಮಾನವರ ಪ್ರಾಣ-ಆಸ್ತಿಪಾಸ್ತಿ ಹಾನಿ ಮಾಡುತ್ತಿರುವ ಕಾಡಾನೆಗಳನ್ನು ಜಿಲ್ಲೆಯಿಂದ ಸ್ಥಳಾಂತರಿಸುವಂತೆ ಆಗ್ರಹಿಸಿ ತಾ. 5ರಿಂದ (ನಾಳೆಯಿಂದ) ಮಡಿಕೇರಿ ಅರಣ್ಯ ಭವನದೆದುರು ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಜನಪರ ಹೋರಾಟ ಸಮಿತಿ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದ 25 ವರ್ಷಗಳಿಂದ ಕಾಡಾನೆಗಳ ಹಾವಳಿ ಇದ್ದುದು, ಇತ್ತೀಚಿನ ದಿನಗಳಲ್ಲಿ ಮಿತಿಮೀರಿದೆ. ಚೆಟ್ಟಳ್ಳಿ, ಈರಳೆವಳಮುಡಿ, ಚೇರಳ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಈಗಾಗಲೇ ಮಾನವ ಪ್ರಾಣ ಹಾನಿಯನ್ನೂ ನಡೆಸಿದೆ. ಲಕ್ಷಾಂತರ ಮೌಲ್ಯದ ಕೃಷಿ ಫಸಲು ನಷ್ಟಗೊಂಡಿದ್ದು, ರಾತ್ರಿ ವೇಳೆಯಲ್ಲಿ ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.
ಕಾಡಾನೆಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಕಣ್ಣೊರೆಸುವ ತಂತ್ರವಾಗಿ ಕಾಡಾನೆಗಳನ್ನು ಅರಣ್ಯ ಕಟ್ಟುವ ನಾಟಕ ಮಾಡುತ್ತಿದ್ದಾರೆ. ದಿನವೊಂದಕ್ಕೆ 15 ಸಾವಿರ ಖರ್ಚಾಗುತ್ತಿದೆ ಎಂದು ಲೆಕ್ಕಾಚಾರ ನೀಡುತ್ತಿದ್ದಾರೆ. ಸರ್ಕಾರದ ಹಣವನ್ನು ಈ ರೀತಿಯಾಗಿ ವ್ಯಯ ಮಾಡುವ ಬದಲು ಉಪಟಳ ನೀಡುತ್ತಿರುವ ಕಾಡಾನೆಗಳನ್ನು ನಾಗರಹೊಳೆ ಅಭಯಾರಣ್ಯಕ್ಕೆ ಸ್ಥಳಾಂತರಿಸಬೇಕು ಎಂದು ಮಣಿ ಉತ್ತಪ್ಪ ಒತ್ತಾಯಿಸಿದರು. ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಆನೆಗಳು ನಿಜವಾಗಿಯೂ ಕಾಡಾನೆಗಳೇ? ಎಂಬ ಸಂಶಯ ಮೂಡುತ್ತಿದೆ. ರಾತ್ರಿಯ ವೇಳೆಯಲ್ಲಿ ಲೈಟ್ ಬೆಳಕು ಹಾಕಿದರೂ ಆನೆಗಳು ಅಲುಗಾಡುತ್ತಿಲ್ಲ. ಇದರಿಂದಾಗಿ ಪಳಗಿಸಿದ ಆನೆಗಳನ್ನು ತಂದು ಇಲ್ಲಿ ಬಿಟ್ಟಿರಬಹುದು ಎಂಬ ಸಂಶಯ ಈ ವ್ಯಾಪ್ತಿಯ ಸಾರ್ವಜನಿಕರನ್ನು ಕಾಡುತ್ತಿದೆ ಎಂದು ಹೇಳಿದರು.
ಮಂಗಳವಾರ ರಾತ್ರಿ 2 ಮನೆಗಳ ಮೇಲೆ ದಾಂಧಲೆ ನಡೆಸಿದ ಕಾಡಾನೆಗಳು ಇಂದು ಹಾಡಹಗಲೇ ಮನೆಯೊಂದರ ಮೇಲೆ ಧಾಳಿ ಮಾಡಿದ್ದು ಇದೀಗ ಎಲ್ಲರಲ್ಲೂ ಆತಂಕ ಮನೆ ಮಾಡುವಂತೆ ಮಾಡಿದೆ. ಇಷ್ಟಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜನರ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಮಣಿ ಉತ್ತಪ್ಪ, ಕಾಡಾನೆ ಧಾಳಿಗೆ ತುತ್ತಾದ ಮಹಿಳೆಯ ಕುಟುಂಬಕ್ಕೆ ಇನ್ನೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಕಾಡಾನೆಗಳನ್ನು ಒಂದು ಗ್ರಾಮದಿಂದ ಓಡಿಸಿದರೆ, ಮತ್ತೆ ಪಕ್ಕದ ಗ್ರಾಮದಲ್ಲಿ ಸಮಸ್ಯೆ ಆರಂಭವಾಗುತ್ತದೆ. ಇದು ಶಾಶ್ವತ ಪರಿಹಾರವಲ್ಲ ಎಂದ ಅವರು, ಕೂಡಲೇ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಹಿಡಿದು ಜಿಲ್ಲೆಯಿಂದಲೇ ಸ್ಥಳಾಂತರಿಸಿದ್ದಲ್ಲಿ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಬಹುದಾಗಿದೆ. ಈ ಬಗ್ಗೆ ತಾಲೂಕು ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸಿದರೂ ಸಹ ಸಮರ್ಪಕ ಸ್ಪಂದನೆ ಲಭಿಸಿಲ್ಲ. ಸ್ಥಳಕ್ಕೆ ಎಸಿಎಫ್ ಆಗಮಿಸಬೇಕೆಂದು ಒತ್ತಾಯಿಸಿದ್ದರೂ ಸ್ಪಂದನೆಯಿಲ್ಲ. ಜನರ ಪ್ರಾಣದ ಬಗ್ಗೆ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆರೋಪಿಸಿದರು.
ಈ ಹಿನ್ನೆಲೆ ಕಾಡಾನೆಗಳನ್ನು ಜಿಲ್ಲೆಯಿಂದಲೇ ಸ್ಥಳಾಂತರಿಸಿ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕೆಂದು ಆಗ್ರಹಿಸಿ ತಾ. 5ರಂದು ಬೆಳಿಗ್ಗೆ 11 ಗಂಟೆಯಿಂದ ಮಡಿಕೇರಿಯ ಅರಣ್ಯ ಭವನದೆದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಂಠಿ ಕಾರ್ಯಪ್ಪ, ಜನಪರ ಹೋರಾಟ ಸಮಿತಿಯ ನೂಜಿಬೈಲು ನಾಣಯ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಮಣಿ ಉತ್ತಪ್ಪ ತಿಳಿಸಿದರು.