ಸೋಮವಾರಪೇಟೆ, ಸೆ. 22: ಸಮೀಪದ ಕಾಜೂರಿನ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ವತಿಯಿಂದ ಹರಿಹರ ಯುವಕ ಸಂಘದ ಆವರಣದಲ್ಲಿ ಆಯೋಜಿಸಿದ್ದ 162ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಎರಡನೇ ವರ್ಷದ ಓಣಂ ಆಚರಣೆ ಅದ್ಧೂರಿಯಾಗಿ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಜನಾಂಗ ಬಾಂಧವರಿಗೆ ಪೂಕಳಂ ಸ್ಪರ್ಧೆ, ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಶ್ರೀ ನಾರಾಯಣ ಗುರುಗಳ ಪ್ರತಿಮೆಯ ಅಲಂಕೃತ ಮಂಟಪವನ್ನು ವಾದ್ಯ ಮೇಳದೊಂದಿಗೆ ಐಗೂರಿನ ಮುತ್ತಪ್ಪ ದೇವಾಲಯದಿಂದ ಆರಂಭಿಸಿ ಕಾಜೂರಿನ ಅಯ್ಯಪ್ಪ ದೇವಸ್ಥಾನದ ವರೆಗೆ ಮೆರವಣಿಗೆ ಮೂಲಕ ತರಲಾಯಿತು. ಕೇರಳೀಯರ ಧಿರಿಸಿನೊಂದಿಗೆ ಮಲೆಯಾಳಿ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಹರಿಹರ ಯುವಕ ಸಂಘದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ನಾರಾಯಣ ಗುರು ಹಾಗೂ ಅಂಬೇಡ್ಕರ್ ಅವರುಗಳು ಅಸ್ಪøಶ್ಯತೆ ವಿರುದ್ಧ ಹೋರಾಡಿದ ಮಹಾನ್ ಚೇತನಗಳಾಗಿದ್ದು, ಅವರ ಆದರ್ಶವನ್ನು ಜಾತಿ ಹಾಗೂ ಧರ್ಮಗಳ ಭೇದವಿಲ್ಲದೇ ಎಲ್ಲರೂ ಪರಿಪಾಲಿಸುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್, ನಾರಾಯಣ ಗುರುಗಳು ಕೇರಳದಲ್ಲಿ ಅಂದಿನ ಕಾಲಘಟ್ಟದಲ್ಲಿ ಆಚರಣೆ ಯಲ್ಲಿದ್ದ ಮೇಲು-ಕೀಳು ಎಂಬ ಬೇಧ-ಭಾವವನ್ನು ತೊಡೆದುಹಾಕಲು ತಮ್ಮ ಪ್ರಾಣವನ್ನು ಲೆಕ್ಕಿಸದೇ ಶ್ರಮಿಸಿದರು. ಅಂತಹ ಶ್ರೇಷ್ಠ ಮಾನವತಾವಾದಿಯ ತ್ಯಾಗ, ತತ್ವಾದರ್ಶ ಗಳನ್ನು ರಾಜಕೀಯ ರಹಿತವಾಗಿ ಹಾಗೂ ಪಕ್ಷಾತೀತವಾಗಿ ಪಾಲಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ವೇದಿಕೆಯಲ್ಲಿ ಎಸ್‍ಎನ್‍ಡಿಪಿ ಕೊಡಗು ಘಟಕದ ಕಾರ್ಯದರ್ಶಿ ಎಂ.ವಿ. ಸಂಜೀವ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಐಗೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಪಾಂಚಾಲಿ ಮೋಹನ್, ಐಗೂರು ಗ್ರಾ.ಪಂ. ಸದಸ್ಯರುಗಳಾದ ಕೆ.ಎಂ. ಗೋಪಾಲಕೃಷ್ಣ, ಕುಮಾರಿ, ಹಿಂದೂ ಮಲಯಾಳಿ ಸಮಾಜದ ತಾಲೂಕು ಅಧ್ಯಕ್ಷ ಪಿ.ಡಿ. ಪ್ರಕಾಶ್, ಎಸ್‍ಎನ್‍ಡಿಪಿ ಕಾಜೂರು ಶಾಖೆಯ ಅಧ್ಯಕ್ಷ ಟಿ.ಕೆ. ಭಾಸ್ಕರ್, ಕಾರ್ಯದರ್ಶಿ ಎಂ.ಕೆ. ಮೋಹನ್, ಐಗೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಪದ್ಮಾವತಿ ಸುಭಾಷ್, ಮಾಜಿ ಉಪಾಧ್ಯಕ್ಷರುಗಳಾದ ಎಂ.ಎ. ಪ್ರಭಾಕರ್, ಟಿ.ಆರ್. ವಿಜಯ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲಕ್ಷ್ಮೀ ಪದ್ಮನಾಭ್ ಪ್ರಾರ್ಥಿಸಿದರೆ, ಕ್ರೀಯೆಟಿವ್ ಅಕಾಡೆಮಿ ಆಡಳಿತ ಅಧಿಕಾರಿ ಸಿ.ಎಸ್. ಮಹೇಶ್ ನಿರೂಪಿಸಿದರು. ಈ ಸಂದರ್ಭ ಎಸ್‍ಎನ್‍ಡಿಪಿ ಸದಸ್ಯೆ ಯಾಗಿ ಕೊಡಗು ಜಿ.ಪಂ.ಗೆ ಆಯ್ಕೆ ಯಾಗಿರುವ ಸುನಿತಾ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.