ವೀರಾಜಪೇಟೆ, ಅ. 23: ವಿಜ್ಞಾನ ಉಗಮವಾಗಿರುವದೇ ವೇದÀಗಳಿಂದ. ಮುದ್ರಾ, ವೇದ, ಮಂತ್ರಗಳ ಸಹಾಯದಿಂದ ಎಲ್ಲಾ ಕಾಯಿಲೆಗಳನ್ನು ಗುಣ ಪಡಿಸಬಹುದು ಎಂದು ಬೆಂಗಳೂರಿನ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕ ಲಕ್ಷ್ಮಿ ಶ್ರೀನಿವಾಸ ಗುರೂಜಿ ಹೇಳಿದರು.

ಕಾಕೋಟುಪರಂಬು ಕಾಳ ಭೈರವೇಶ್ವರ ದೇವಸ್ಥಾನದ ಭಕ್ತಾದಿಗಳು ಕಾಕೋಟುಪರಂಬು ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಔಷಧಿ ರಹಿತ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿ ಮುದ್ರಾ ವಿಜ್ಞಾನವೆಂಬದು ತುಂಬಾ ಕುತೂಹಲದಿಂದ ಕೂಡಿದ ಪ್ರಪಂಚ. ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಈ ಮುದ್ರಾ ವಿಧಾನ ಇಂದಿನವರೆಗೂ ಅಂತಹ ಪರಿಚಿತ ವಲ್ಲದಿದ್ದರೂ ಪ್ರಾಯೋಗಿಕವಾಗಿ ಕಾಯಿಲೆಗಳನ್ನು ಗುಣ ಪಡಿಸುತ್ತದೆ. ಬಹುತೇಕ ಜನರು ಮಧುಮೇಹ, ಉದರ ಬಾದೆ, ಕೀಲು ಗಂಟುಗಳ ತೊಂದರೆಗಳನ್ನು ಮುದ್ರಾ ವಿಜ್ಞಾನದಿಂದ ಗುಣಪಡಿಸಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾಯಿ ಭಿಕ್ಷಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕಾಕಮಾಡ ರವಿ ಸುಬ್ಬಯ್ಯ, ಕಾಳಬೈರವೇಶ್ವರ ದೇವಾಲಯದ ಭಕ್ತಾದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಹಲವಾರು ರೋಗಿಗಳು ಔಷಧಿ ಇಲ್ಲದೆ ಚಿಕಿತ್ಸೆ ಪಡೆದುಕೊಂಡರು.

ಜಿಲ್ಲಾ ಪ್ರಾದೇಶಿಕ ಪ್ರಮುಖ ಕೊಕ್ಕೆಂಗಡ ವಿಕ್ಕಿ ಚಂಗಪ್ಪ ಮಾತನಾಡಿ ಜನರ ಕಷ್ಟಗಳನ್ನು ದೂರ ಮಾಡಲು ನ. 20 ರಂದು ಕಾಕೋಟುಪರಂಬು ಮೈದಾನದಲ್ಲಿ ಲೋಕ ಕಲ್ಯಾಣಕ್ಕಾಗಿ ನಡೆಯುವ ದ್ವಾದಶ ಮಹಾ ಕಾಳಸರ್ಪ ಯಾಗದಲ್ಲಿ ಎಲ್ಲಾ ವರ್ಗದ ಜನತೆ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿದರು.