ಸಿದ್ದಾಪುರ, ಜ. 5: ಸಿದ್ದಾಪುರ ಕಾಂಗ್ರೆಸ್ ಪಕ್ಷದಲ್ಲಿ ಬಹುದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇಂದು ಸ್ಫೋಟಗೊಂಡು ಪಕ್ಷದ ಎರಡು ಗುಂಪುಗಳ ನಡುವೆ ಪರಸ್ಪರ ನೂಕಾಟ, ತಳ್ಳಾಟ ನಡೆದು ಕೈಕೈ ಮಿಲಾಯಿಸುವ ಹಂತ ತಲಪಿ ಬೀದಿ ರಂಪಾಟ ನಡೆದು ನಗೆ ಪಾಟಿಲಿಗೆ ಎಡೆಮಾಡಿಕೊಟ್ಟಿತ್ತು.
ಸಿದ್ದಾಪುರ ಗ್ರಾ.ಪಂ.ನ ಸಭಾಂಗಣದಲ್ಲಿ ಅಪರಾಹ್ನ ಕಾಂಗ್ರೆಸ್ ಪಕ್ಷದ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಸಭೆ ಹಾಗೂ ಮುಂಬರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಚುನಾವಣೆ ಸಂಬಂಧ ಎಐಸಿಸಿಯಿಂದ ವೀಕ್ಷಕರಾಗಿ ಉಷಾ ನಾಯ್ಡು, ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಹಾಗೂ ಕೆಪಿಸಿಸಿ ಸದಸ್ಯ ಹುಸೈನ್ ಆಗಮಿಸಿ ಪಕ್ಷದ ಕಾರ್ಯಕರ್ತರು ಮುಂಬರುವ ಎಲ್ಲಾ ಚುನಾವಣೆಗಳಿಗೆ ಸಜ್ಜಾಗುವಂತೆ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿ ಮೂವರು ಮುಖಂಡರು ವಿವಾಹ ಸಮಾರಂಭವೊಂದಕ್ಕೆ ತೆರಳಿದರು.
ಬಳಿಕ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಸಲಾಂ ಅವರ ಅಧ್ಯಕ್ಷತೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಲು ಸಿದ್ಧವಾಗುತ್ತಿದ್ದಂತೆ ಮಾಜಿ ವಲಯ ಅಧ್ಯಕ್ಷ ಎಂ.ಹೆಚ್. ಮೂಸಾ ಅವರು ತಾನು ತಾ.ಪಂ. ಚುನಾವಣೆಗೆ ಸ್ಪಂದಿಸಿದ ಸಂದರ್ಭದಲ್ಲಿ ತನ್ನ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ತನ್ನನ್ನು ಸೋಲಿಸಲು ಯತ್ನಿಸಿದ್ದ ವೆಂಕಟೇಶ್ ಅವರು ಕಮಲ ಕಾಂಗ್ರೆಸ್ಸಿಗರಾಗಿದ್ದಾರೆ ಎಂದು ಏರು ಧ್ವನಿಯಲ್ಲಿ ಸಭೆಯಲ್ಲಿ ಬಹಿರಂಗವಾಗಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಯತ್ನಿಸಿದ ವೆಂಕಟೇಶ್ ಹಾಗೂ ಮೂಸಾ ಅವರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲ ಉಂಟಾಗಿ ಕಾರ್ಯಕರ್ತರು ಇವರುಗಳನ್ನು ಸಮಾಧಾನಪಡಿಸಲು ಹರಸಾಹಸ ಪಡಬೇಕಾಯಿತು.
ಬಳಿಕ ಸಭೆಯು ಮುಂದುವರಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸರಿತಾ ಪೂಣಚ್ಚ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ತಾನು ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ತನಗೆ ಸ್ಥಳೀಯ ಕಾಂಗ್ರೆಸ್ ಮುಖಂಡರುಗಳಾದ ಉಸ್ಮಾನ್ ಹಾಜಿ ಹಾಗೂ ವೆಂಕಟೇಶ್ ಸಹಕಾರ ನೀಡಲಿಲ್ಲ ಹಾಗೂ ತನ್ನನ್ನು ಸೋಲಿಸಲು ಷಡ್ಯಂತ್ರ ನಡೆಸಿದರು. ಅಲ್ಲದೇ ವಿರೋಧ ಪಕ್ಷಕ್ಕೆ ಸಹಕಾರ ನೀಡಿ ತನ್ನನ್ನು ತೇಜೋವಧೆ ಮಾಡಲು ಎತ್ನಿಸಿದರು. ಇವರುಗಳು ಈ ಸಭೆಯ ವೇದಿಕೆಯಲ್ಲಿ ಕುಳಿತುಕೊಳ್ಳಲು ನೈತಿಕತೆ ಇಲ್ಲವೆಂದು ಹೇಳುತ್ತಿದ್ದಂತೆ ಇದಕ್ಕೆ ಆಕ್ಷೇಪ ಎತ್ತಿದ ಉಸ್ಮಾನ್ ಹಾಜಿ ಹಾಗೂ ವೆಂಕಟೇಶ್ ಮತ್ತು ಕಾರ್ಯಕರ್ತರು ಸರಿತಾ ಪೂಣಚ್ಚ ಅವರಿಗೆ ಇವರನ್ನು ನಿಂದಿಸಲು ಯಾವದೇ ಹಕ್ಕಿಲ್ಲವೆಂದಾಗ ಎರಡು ಗುಂಪಿನ ನಡುವೆ ಪರಸ್ಪರ ಏಕವಚನದಲ್ಲಿ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತು.
ಆರೋಪ ಪ್ರತ್ಯಾರೋಪ ನಡೆದು ಇಡೀ ಸಭಾಂಗಣದಲ್ಲಿ ಗೊಂದಲದಿಂದ ಕೂಡಿ ಪಕ್ಷದ ಆಂತರಿಕ ಕಲಹ ಬಹಿರಂಗವಾಗಿ ಸ್ಫೋಟಗೊಂಡಿತು. ಅಲ್ಲದೇ ಇಂದು ಪಕ್ಷದ ಕಾರ್ಯಕರ್ತರ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕರೆದ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡು ಸಭಾಂಗಣದ ಒಳಗೂ, ಹೊರಗೂ ಸಾರ್ವಜನಿಕರಿಗೆ ಉಚಿತ ಮನೋರಂಜನೆ ನೀಡಿತು. ಅಲ್ಲದೇ ಸಭೆಯನ್ನು ತಹಬದಿಗೆ ತರಲು ಕಷ್ಟವಾದ ಕಾರಣ ಬ್ಲಾಕ್ ಅಧ್ಯಕ್ಷ ಸಲಾಂ ಸಭೆಯನ್ನು ರದ್ದುಗೊಳಿಸಿದರು. ಸಭೆಯಲ್ಲಿ ಗೊಂದಲದ ವಾತಾವರಣವನ್ನು ವೀಕ್ಷಿಸಿದ ನಿಷ್ಠಾವಂತ ಕಾರ್ಯಕರ್ತರು ಹಿಡಿಶಾಪ ಹಾಕಿ ತೆರಳಿದರಲ್ಲದೇ ಭಾಗವಹಿಸಿದ ಜಿಲ್ಲೆಯ ಮುಖಂಡರಿಗೂ ಇರಿಸುಮುರಿಸು ಆಗಿ ಪಕ್ಷದ ಮಾನ ಹರಾಜಾಯಿತು.
-ಎ.ಎನ್. ವಾಸು