ಸೋಮವಾರಪೇಟೆ, ಜ. 20: ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ಸದಸ್ಯರ ಮೇಲೆ ಬಿಜೆಪಿಯ ಕೆಲವರು ದಬ್ಬಾಳಿಕೆ ನಡೆಸಿದ್ದು, ಈ ಕ್ರಮವನ್ನು ಖಂಡಿಸಿ ತಾ. 23ರಂದು ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಬ್ಲಾಕ್ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅನಂತ್ ಕುಮಾರ್ ವಿರುದ್ದ ಬಿಜೆಪಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮತ್ತು ಇತರರು ದಬ್ಬಾಳಿಕೆ ನಡೆಸಿ ಸಭೆಯಿಂದ ಹೊರ ನೂಕಿರುವ ಕ್ರಮ ಖಂಡನೀಯ ಎಂದರು.
ಸದಸ್ಯರನ್ನು ಸಭೆಯಿಂದ ಹೊರಗೆ ಕಳುಹಿಸುವ ಅಧಿಕಾರ ತಾಲೂಕು ಪಂಚಾಯಿತಿ ಆಡಳಿತ ಮಂಡಳಿ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಇಲ್ಲ. ಅಧ್ಯಕ್ಷರು ತಮ್ಮ ಅಧಿಕಾರ ಚಲಾಯಿಸುವಲ್ಲಿ ವಿಫಲರಾಗಿದ್ದು, ಇದನ್ನು ದುರುಪಯೋಗ ಪಡಿಸಿಕೊಂಡ ಕೆಲವರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಬಗ್ಗುವದಿಲ್ಲ. ತಕ್ಕ ಉತ್ತರ ನೀಡಲು ಸಿದ್ದವಿದೆ ಎಂದರು.ಬಲ್ಲಾರಂಡ ಮಣಿ ಉತ್ತಪ್ಪ ಅವರು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ಹಣೆ ಮೇಲೆ ಉದ್ದ ನಾಮ ಹಾಕಿಕೊಂಡು ಹೆದರಿಸಲು ಪ್ರಯತ್ನಿಸೋದು ಬೇಡ. ನಾವುಗಳೂ ಹಿಂದೂಗಳೇ ನಮಗೂ ಉದ್ದ ನಾಮ ಹಾಕಿಕೊಳ್ಳಲು ಬರುತ್ತದೆ. ಬೆದರಿಕೆಗಳಿಗೆ ನಾವು ಬಗ್ಗುವದಿಲ್ಲ. ಕಾಂಗ್ರೆಸ್ ಸದಸ್ಯರು ತಪ್ಪು ಮಾಡಿದ್ದರೆ ಪ್ರಶ್ನಿಸಲಿ; ಅದನ್ನು ಬಿಟ್ಟು ವೈಯಕ್ತಿಕ ತೇಜೋವಧೆ ಸರಿಯಲ್ಲ ಎಂದು ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ದಬ್ಬಾಳಿಕೆಯನ್ನು ಖಂಡಿಸಿ ತಾ. 23ರಂದು ತಾಲೂಕು ಪಂಚಾಯಿತಿ ಕಚೇರಿ ಎದುರು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವದು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್, ವಲಯ ಹಾಗೂ ಹೋಬಳಿ ಮಟ್ಟದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಪಕ್ಷದ ಬ್ಲಾಕ್ ಕಾರ್ಯದರ್ಶಿ ವಿ.ಎ. ಲಾರೆನ್ಸ್, ಪ್ರಮುಖರಾದ ಅಜ್ಜಳ್ಳಿ ರವಿ, ಕೊಡ್ಲಿಪೇಟೆ ಹನೀಫ್, ಎಲ್.ಜಿ. ಮದನ್ ಉಪಸ್ಥಿತರಿದ್ದರು.