ಮಡಿಕೇರಿ, ಡಿ. 28: ದಲಿತರು ಕಾಂಗ್ರೆಸ್ ಮೇಲೆ ಇರಿಸಿದ್ದ ಭರವಸೆ ಹುಸಿಯಾಗಿದೆ. ಈ ಹಿನ್ನೆಲೆ ದಲಿತ ಜನಾಂಗದವರು ಬಿ.ಜೆ.ಪಿ. ಸೇರುವದಕ್ಕೆ ಕಾತುರರಾಗಿದ್ದಾರೆ ಎಂದು ಬಿ.ಜೆ.ಪಿ. ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯಾಧ್ಯಕ್ಷ ಡಿ.ಎಸ್. ವೀರಯ್ಯ ಹೇಳಿದ್ದಾರೆ.
ನಗರದ ಬಾಲಭವನದಲ್ಲಿ ನಡೆದ ಬಿ.ಜೆ.ಪಿ. ಪರಿಶಿಷ್ಟ ಜಾತಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಕಾಂಗ್ರೆಸ್ ಯುವ ದಲಿತ ನಾಯಕರಿಗೂ ಉತ್ತಮ ಸ್ಥಾನಮಾನ, ಗೌರವ ನೀಡಲಿಲ್ಲ. ಪ್ರತಿ ಹಂತದಲ್ಲೂ ಕಾಂಗ್ರೆಸ್ ಅಧಿಕಾರ ಪಡೆದದ್ದೂ ಬಿಟ್ಟರೆ ಯಾವದೇ ಅಭಿವೃದ್ಧಿ ಮಾಡಲಿಲ್ಲ ಎಂದು ದೂರಿದರು. ಬಿ.ಜೆ.ಪಿ. ಅಂಬೇಡ್ಕರ್ ಅವರ ತತ್ವ, ಚಿಂತನೆ ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದ್ದರಿಂದಲೇ ಇಂದು ಎಸ್.ಸಿ. ಮೋರ್ಚಾ ಬಲಗೊಳ್ಳುತ್ತಿದೆ ಎಂದು ಹೇಳಿದರು. ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಆತ್ಮಾನಂದ ಮಾತನಾಡಿ, ಕಾಂಗ್ರೆಸ್ 60 ವರ್ಷಗಳ ಕಾಲ ಜನಸಾಮಾನ್ಯರ ತುಡಿತ ಅರಿಯದೇ ದೇಶವನ್ನು ಆಳಿದೆ. ಆದರೆ ಬಿ.ಜೆ.ಪಿ. ಇಂದು ವಿಶೇಷ ದಿಕ್ಕಿನಲ್ಲಿ ಸಾಗುತ್ತಿದ್ದು, ಪ್ರತಿಯೊಂದು ಸಮಾಜಕ್ಕೆ ಪ್ರಾತಿನಿಧ್ಯ ನೀಡುವಲ್ಲಿ ಗಮನಹರಿಸುತ್ತಿದೆ ಎಂದರು. ರಾಜ್ಯ ಉಪಾಧ್ಯಕ್ಷ ನಾಗರಾಜ್ ಮಲ್ಲಾಡಿ ಮಾತನಾಡಿ, ಕಾಂಗ್ರೆಸ್ ಸರಕಾರ ಇಂದು ಉಸಿರು ಗಟ್ಟಿದ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಲವು ಸಚಿವರು ಹಗರಣಗಳ ಆರೋಪ ಹೊತ್ತುಕೊಂಡು ಆಡಳಿತ ನಡೆಸುತ್ತಿರುವದು ರಾಜ್ಯದ ದುರಾದೃಷ್ಟಕರ. ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತ ದಲಿತರು ಇಂದು ಸರ್ವರನ್ನು ಸಮನಾಗಿ ಕಾಣುವ ಬಿ.ಜೆ.ಪಿ.ಯತ್ತ ವಾಲುತ್ತಿದ್ದು, ಪಕ್ಷ ಸದೃಢ ಗೊಳ್ಳುತ್ತಿದೆ ಎಂದು ಹೇಳಿದರು. ವೇದಿಕೆಯಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಸಿ. ಸತೀಶ್, ರಾಜ್ಯ ಸಮಿತಿ ಸದಸ್ಯ ವರದರಾಜ್, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಶಿವಪ್ಪ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಎಸ್. ರಾಜಾರಾವ್ ಹಾಗೂ ಇನ್ನಿತರರು ಇದ್ದರು.