ಮಡಿಕೇರಿ ಡಿ. 28: ಭಾರತದ ನೈತಿಕ, ಸಾಮಾಜಿಕ ಮತ್ತು ರಾಜಕೀಯ ಪುನರುತ್ಥಾನಕ್ಕಾಗಿ ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯ ನಿಲುವನ್ನು ಪ್ರದರ್ಶಿಸಿ 132 ವರ್ಷಗಳ ಹಿಂದೆ ಸ್ಥಾಪನೆಗೊಂಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ದುಡಿಯಲು ಅವಕಾಶ ಸಿಕ್ಕಿರುವದು ಹೆಮ್ಮೆಯ ವಿಚಾರವೆಂದು ಜಿಲ್ಲಾ ಕಾಂಗ್ರೆಸ್‍ನ ನಿಕಟಪೂರ್ವ ಅಧ್ಯಕ್ಷ ಬಿ.ಟಿ. ಪ್ರದೀಪ್ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ 132 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾರತ ನಾಗರಿಕ ಸೇವೆಯ ನಿವೃತ್ತ ಅಧಿಕಾರಿಯಾಗಿದ್ದ ಎ.ಒ. ಹ್ಯೂಮ್ ಅವರು ಭಾರತೀಯರಲ್ಲಿ ಸಾಮರಸ್ಯ ಮತ್ತು ಏಕತೆಯನ್ನು ಮೂಡಿಸಲು ಎಲ್ಲ ನಾಯಕರುಗಳ ಮನವೊಲಿಸಿ 1885ರ ಡಿ. 28 ರಂದು ಮುಂಬಯಿಯಲ್ಲಿ ಪ್ರಥಮ ಅಧಿವೇಶನ ನಡೆಸಿದರು. ಅಲ್ಲಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯಾನಂತರ ಜವಾಹರ್ ಲಾಲ್ ನೆಹರೂ ಅವರಂತಹ ಮಹಾನ್ ನಾಯಕರ ನೇತೃತ್ವದಲ್ಲಿ ಹಸಿರು ಕ್ರಾಂತಿ ಹಾಗೂ ಕೈಗಾರಿಕಾ ಕ್ರಾಂತಿಯ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಯಿತು. ಕಾಂಗ್ರೆಸ್ ಪಕ್ಷದಲ್ಲಿ ದುಡಿಯಲು ಅವಕಾಶ ದೊರೆತಿರುವದು ತಮ್ಮ ಸೌಭಾಗ್ಯವೆಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಮಾತನಾಡಿ ಕೇವಲ 76 ಪ್ರತಿನಿಧಿಗಳಿಂದ ಆರಂಭವಾದ ಭಾರತೀಯ ಕಾಂಗ್ರೆಸ್ ಪಕ್ಷ ನಂತರದ ದಿನಗಳಲ್ಲಿ ದೇಶವ್ಯಾಪಿ ವಿಸ್ತರಿಸಿ ಕೋಟ್ಯಂತರ
(ಮೊದಲ ಪುಟದಿಂದ) ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವದು ಹೆಮ್ಮೆಯ ವಿಚಾರವಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕಿರುವ ಸಾಮಥ್ರ್ಯವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಮಾತನಾಡಿ ಕಾಂಗ್ರೆಸ್ ಈ ದೇಶದ ಜನರಲ್ಲಿ ಅಚ್ಚಳಿಯದೆ ಉಳಿದಿದೆ. ಇದೇ ಕಾರಣಕ್ಕೆ 132 ವರ್ಷಗಳಿಂದ ಕಾಂಗ್ರೆಸ್ ಪಕ್ಷ ತನ್ನದೇ ಆದ ಜವಾಬ್ದಾರಿಯನ್ನು ನಿರ್ವಹಿಸುತ್ತಾ ದೇಶ ಹಾಗೂ ಜನಪರವಾದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷÀ ಚಿಲ್ಲವಂಡ ಕಾವೇರಪ್ಪ, ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಕಾಂಗ್ರೆಸ್ ಸಾಧನೆ ಬಗ್ಗೆ ಮಾತನಾಡಿದರು.
ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಅಧ್ಯಕ್ಷೆ ಜುಲೇಕಾಬಿ, ಸದಸ್ಯರಾದ ಲೀಲಾಶೇಷಮ್ಮ, ಪ್ರಕಾಶ್ ಆಚಾರ್ಯ, ಚುಮ್ಮಿ ದೇವಯ್ಯ, ಕೆ.ಎಂ. ವೆಂಕಟೇಶ್, ಉದಯಕುಮಾರ್, ಗಿಲ್ಬರ್ಟ್ ಲೋಬೋ, ಯತೀಶ್ ಕುಮಾರ್, ಬಂಧೀಖಾನೆ ಸಮಿತಿಯ ಅಧ್ಯಕ್ಷ ಹನೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ, ಪ್ರಮುಖರಾದ ಗಾಯತ್ರಿ ನರಸಿಂಹ, ವಿ.ಎಲ್. ಸುರೇಶ್, ಮೇಕೇರಿ ಹನೀಫ್, ಸುಬ್ಬಯ್ಯ, ವಿಜಯಕುಮಾರ್, ರಾಣಿ, ಮಹದೇವ ದಾಮೋದರ, ಸುಂದರ, ಆನಂದ, ಬಿ.ಎಂ. ಪೂಣಚ್ಚ, ರವಿ, ಪುರುಷೋತ್ತಮ, ಸುನಿಲ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.