ಸಿದ್ದಾಪುರ. ಸೆ. 12: ಇಲ್ಲಿನ ಗ್ರಾ.ಪಂ ವ್ಯಾಪ್ತಿಯ ಗುಹ್ಯ ಗ್ರಾಮದಲ್ಲಿ ಕಸ ವಿಲೇವಾರಿ ಮಾಡಲು ಜಾಗ ಗುರುತಿಸಲಾಗಿದ್ದು, ಗ್ರಾಮದಲ್ಲಿ ಕಸವಿಲೇವಾರಿ ಮಾಡುವದಕ್ಕೆ ಗುಹ್ಯ ವಾರ್ಡ್ ಸದಸ್ಯರು ತೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ.ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ ಸದಸ್ಯರಾದ ರೆಜಿತ್ ಕುಮಾರ್, ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಹಲವಾರು ಸರಕಾರಿ ಭೂಮಿಗಳಿದ್ದು, ಅದನ್ನೆಲ್ಲ ಬಿಟ್ಟು ಗುಹ್ಯ ಗ್ರಾಮದ ಜನವಸತಿ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುವ ಬಗ್ಗೆ ಪ್ರಸ್ತಾವನೆಯಿದೆ. ಕಸ ವಿಲೇವಾರಿಗೆ ಗುರುತಿಸಿರುವ ಜಾಗವು ಮುಖ್ಯ ರಸ್ತೆಯ ಬದಿಯಲ್ಲೇ ಇದು, ಸಮೀಪದಲ್ಲಿ ಜನವಸತಿ ಇದೆ. ಹೀಗಾಗಿ ಆ ಜಾಗದಲ್ಲಿ ಕಸ ವಿಲೇವಾರಿ ಮಾಡುವದರಿಂದ ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿದೆ. ಕೊಳೆತ ತ್ಯಾಜ್ಯಗಳನ್ನು ತಿನ್ನಲು ಬೀದಿ ನಾಯಿಗಳು ಬರುವದರಿಂದ ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ನಡೆದಾಡಲು ಕಷ್ಟವಾಗುತ್ತದೆ. ಮಾತ್ರವಲ್ಲದೆ ಸುಮಾರು 1500 ವರ್ಷಗಳ ಇತಿಹಾಸವನ್ನು ಹೊಂದಿರುವ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯಕ್ಕೂ ಇದೇ ಮಾರ್ಗವಾಗಿ ಸಂಚರಿಸಬೇಕಿದ್ದು, ಭಕ್ತಾದಿಗಳಿಗೂ ತೊದರೆ ಉಟಾಗಲಿದೆ ಎಂದರು. ಈ ಕುರಿತು ಗ್ರಾಮಸ್ಥರ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಆಕ್ಷೇಪಣೆ ನೀಡಲಾಗುವದು ಎಂದರು.

ಗ್ರಾ.ಪಂ. ಸದಸ್ಯೆ ಪ್ರತಿಮಾ ಚಂದ್ರಶೇಖರ್ ಮಾತನಾಡಿ, ಪಟ್ಟಣದಲ್ಲಿ ಉತ್ಪತಿಯಾಗುವ ಕಸವನ್ನು ಹಳ್ಳಿಗೆ ಸುರಿಯುವದು ನ್ಯಾಯವಲ್ಲ. ಕಸ ವಿಲೇವಾರಿ ಮಾಡಿದ್ದಲ್ಲಿ ಗ್ರಾಮಸ್ಥರಿಗೆ ಹಲವು ರೀತಿಯಲ್ಲಿ ತೊಂದರೆ ಉಂಟಾಗಲಿದೆ.

ಜಿಲ್ಲಾಧಿಕಾರಿಯವರು ಗುಹ್ಯ ಗ್ರಾಮದಲ್ಲಿ ಕಸವಿಲೇವಾರಿಗೆ ಅವಕಾಶ ನೀಡಬಾರದು. ಇಲ್ಲವಾದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದರು.

ಈ ಸಂದರ್ಭ ಗುಹ್ಯ ವಾರ್ಡ್‍ನ ಗ್ರಾ.ಪಂ. ಸದಸ್ಯರಾದ ಶಿವಕುಮಾರ್, ಶೈಲ, ಅಬ್ದುಲ್ ಖಾದರ್, ದೇವಜಾನು ಉಪಸ್ಥಿತರಿದ್ದರು.