*ಸಿದ್ದಾಪುರ, ಅ. 24: ಸಿದ್ದಾಪುರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪ್ರಾರಂಭ ಗೊಳ್ಳುತ್ತಿದಂತೆ ಸರ್ವ ಸದಸ್ಯರು ಎದ್ದು ನಿಂತು ತ್ಯಾಜ್ಯದ ಸಮಸ್ಯೆ ಇತ್ಯರ್ಥ ಗೊಳಿಸಿದ ನಂತರ ಸಭೆ ಪ್ರಾರಂಭಿಸುವಂತೆ ಸರ್ವ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆ ಮುಂದೂಡಿ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಸ್ಧಳಕ್ಕೆ ಅಧಿಕಾರಿಗಳು ಬರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ತ್ಯಾಜ್ಯ ವಿಲೇವಾರಿಗೆ ಸೂಕ್ತವಾದ ಸ್ಥಳ ಜಿಲ್ಲಾಡಳಿತದಿಂದ ಸಿಗದ ಕಾರಣ ಗ್ರಾಮ ಪಂಚಾಯಿತಿಯ ಹಿಂಭಾಗದ ಸ್ಥಳದಲ್ಲಿ ಗುಂಡಿಯನ್ನು ಮಾಡಿ ತ್ಯಾಜ್ಯವನ್ನು ಸುರಿಯಲಾಗುತ್ತಿದೆ.
ತ್ಯಾಜ್ಯದ ದುರ್ವಾಸನೆಯಿಂದ ಸುತ್ತಮುತ್ತಲಿನ ನಾಗರಿಕರು, ಹೊಟೇಲ್ ಮಾಲೀಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ದುರ್ವಾಸನೆಯಿಂದ ಕಷ್ಟಕರವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಗ್ರಾಮ ಪಂಚಾಯಿತಿಯ ಈ ನಿರ್ಣಯದಿಂದ ಸಮಸ್ಯೆಯಾಗಿದೆ. ತ್ಯಾಜ್ಯ ಸುರಿಯುವದರಿಂದ ವಿವಿಧ ಸಂಘಟನೆಗಳು ಸ್ಥಳದಿಂದ ತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಪಂಚಾಯಿತಿಗೆ ಕಲಾವಧಿ ನೀಡಿದ್ದರು.
ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರುವಂತೆ ಎಲ್ಲಾ ಸದಸ್ಯರು ಪ್ರತಿಭಟನೆಗೆ ಮುಂದಾದರು, ತ್ಯಾಜ್ಯ ವಿಲೇವಾರಿಗೆ ಅಧಿಕಾರಿಗಳು ಸೂಕ್ತವಾದ ಸ್ಥಳ ಒದಗಿಸುವಂತೆ ಪಟ್ಟು ಹಿಡಿದು ಪ್ರತಿಭಟನೆಗೆ ಕುಳಿತರು. ಸಂಜೆ 3 ಗಂಟೆಗೆ ತಾಲೂಕು ತಹಶೀಲ್ದಾರ್ ಮಹದೇವ್ ಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಡ್ನೇಕರ್ ಪಂಚಾಯಿತಿಗೆ ಆಗಮಿಸಿದರು.
ಅಧಿಕಾರಿಗಳನ್ನು ಕಂಡ ತಕ್ಷಣ ಪ್ರತಿಭಟನೆಯ ತೀವ್ರತೆ ಅಧಿಕವಾಗತೊಡಗಿತು. ಅಧಿಕಾರಿಗಳ ಜೊತೆ ಏರು ಧ್ವನಿಯಲ್ಲಿ ಮಾತನಾಡತೊಡಗಿದರು.
ಪ್ರತಿಭಟನಾಕಾರರೊಂದಿಗೆ ಅಧಿಕಾರಿಗಳು ಮಾತನಾಡಿ, ಗ್ರಾಮ ಪಂಚಾಯಿತಿ ಈ ಹಿಂದೆ ನೀಡಿದ ದಾಖಲೆಯ ಅನುಸಾರವಾಗಿ ಪೈಸಾರಿ ಜಾಗವನ್ನು ಗುರುತಿಸಿ ಅನುಮತಿಗಾಗಿ ಕಡತಗಳನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಆದಷ್ಟು ಬೇಗ ತ್ಯಾಜ್ಯದ ಸಮಸ್ಯೆಗೆ ಸೂಕ್ತವಾದ ಸ್ಥಳ ನೀಡುವದಾಗಿ ಭರವಸೆ ನೀಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾ ಕಾರರು ಹಲವು ಸ್ಥಳವನ್ನು ಹುಡುಕಿಕೊಟ್ಟರೂ ಸ್ಥಳ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಸ್ಥಳ ದೊರಕದಿದ್ದಲ್ಲಿ ಗುರುವಾರ ಸರ್ವ ಪಕ್ಷ ಹಾಗೂ ವಿವಿಧ ಸಂಘಟನೆಗಳ ಸಭೆ ಕರೆದಿದ್ದು. ಶುಕ್ರವಾರ ಸಿದ್ದಾಪುರ ಪಟ್ಟಣದ ಅಂಗಡಿ ಮುಗ್ಗಟ್ಟುಗಳ ಮಾಲೀಕರ ಸಹಕಾರದಿಂದ ಪಟ್ಟಣದ ಅಂಗಡಿ ಗಳನ್ನು ಬಂದ್ ಮಾಡುವದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ ಹಾಗೂ ಸರ್ವ ಸದಸ್ಯರುಗಳು ಎಚ್ಚರಿಸಿದರು. ತಾಲೂಕು ಪಂಚಾಯಿತಿ ಸದಸ್ಯೆ ಚಿನ್ನಮ್ಮ ಸೇರಿದಂತೆ ಇತರರು ಹಾಜರಿದ್ದರು.
-ಅಂಚೆಮನೆ ಸುಧಿ