ಕುಶಾಲನಗರ, ನ. 7: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಜನವರಿಯಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಥಮ ಪೂರ್ವಭಾವಿ ಸಭೆ ಶಾಸಕ ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಿತು.ಸಭೆಯಲ್ಲಿ ಸಮ್ಮೇಳನದ ರೂಪುರೇಷೆ, ತಯಾರಿ, ಸಮಿತಿಗಳ ರಚನೆ, ಹಣಕಾಸು ಕ್ರೋಢಿಕರಣ ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆಯಿತು. ಸಮ್ಮೇಳನದ ಯಶಸ್ಸಿಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಕುರಿತು ಸಭೆಯಲ್ಲಿದ್ದ ಪ್ರಮುಖರು ಹಲವು ಸಲಹೆ ಸೂಚನೆಗಳನ್ನು ಸಭೆಯ ಮುಂದಿಟ್ಟರು. ಸಮ್ಮೇಳನ ಪೂರ್ವಸಿದ್ಧತೆಗಾಗಿ ವಿವಿಧ ಉಪ ಸಮಿತಿಗಳ ಆಯ್ಕೆಯ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಕುಶಾಲನಗರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳು, ದಾನಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ಸಮ್ಮೇಳನದ ಜವಾಬ್ದಾರಿ ಹೊರುವ ನಿಟ್ಟಿನಲ್ಲಿ ಮುಂದಿನ ಹಂತದ ಸಭೆ ಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚಿಸಲಾಗುವದು ಎಂದರು.

ಪ್ರಾಸ್ತಾವಿಕ ನುಡಿಗಳಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಎರಡು ದಶಕಗಳ ನಂತರ ಕುಶಾಲನಗರದಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಜಿಲ್ಲೆಯ ಪ್ರತಿಭೆಗಳಿಗೆ ಮೊದಲ ಆದ್ಯತೆ ಕಲ್ಪಿಸಲಾಗುವದು. ಹೊರ ಜಿಲ್ಲೆಯ ಖ್ಯಾತ ಸಾಹಿತಿಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಜಿಲ್ಲೆಯ ಸಾಹಿತಿಗಳ ಜೊತೆ ಸಂವಾದ ನಡೆಸಲಿದ್ದಾರೆ ಎಂದರು.

ಕೊಡಗು ಜಿ.ಪಂZ. ಸದಸ್ಯೆ ಕೆ.ಆರ್. ಮಂಜುಳಾ, ಕುಶಾಲನಗರ ಪ.ಪಂ. ಅಧ್ಯಕ್ಷ ಎಂ.ಎಂ. ಚರಣ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ನಾಣಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜವರ, ಎಪಿಸಿಎಂಎಸ್ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.