ಸಿದ್ದಾಪುರ, ನ. 5: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದು, ಪಟ್ಟಣ ದಾದ್ಯಂತ ದುರ್ನಾತ ಬೀರುತ್ತಿದೆ.

ಜಿಲ್ಲೆಯ ಅತಿದೊಡ್ಡ ಹಾಗೂ ಹೆಚ್ಚು ವರಮಾನ ಹೊಂದಿರುವ ಗ್ರಾ.ಪಂ. ಎಂಬ ಕೀರ್ತಿ ಹೊಂದಿ ರುವ ಸಿದ್ದಾಪುರದಲ್ಲಿ ಇದೀಗ ಅಶುಚಿತ್ವ ತಾಂಡವವಾಡುತ್ತಿದ್ದು, ಎತ್ತ ನೋಡಿದರೂ ಕಸದ ರಾಶಿ ತುಂಬಿ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಮುಖ್ಯವಾಗಿ ಬಸ್ ನಿಲ್ದಾಣ, ಹಳೆ ಸಿದ್ದಾಪುರ, ವೀರಾಜಪೇಟೆ ರಸ್ತೆ, ಎಂ.ಜಿ ರಸ್ತೆ ಸೇರಿದಂತೆ ಪಟ್ಟಣದ ಬಹುತೇಕ ಎಲ್ಲಾ ರಸ್ತೆಗಳಲ್ಲಿ ರಾಶಿ ರಾಶಿ ಕಸಗಳು ತುಂಬಿದ್ದು, ತ್ಯಾಜ್ಯಗಳು ಕೊಳೆತು ದುರ್ನಾತ ಬೀರುತ್ತಿವೆ.

ಕಸದ ರಾಶಿಗಳಲ್ಲಿನ ತ್ಯಾಜ್ಯವನ್ನು ತಿನ್ನಲು ಬೀದಿ ನಾಯಿಗಳು ಬರುತ್ತಿದ್ದು, ಪಟ್ಟಣದಾದ್ಯಂತ ಅಶುಚಿತ್ವ ತಾಂಡವವಾಡುತ್ತಿದ್ದರೂ, ಗ್ರಾ.ಪಂ. ಆಡಳಿತ ಮಂಡಳಿ ಮಾತ್ರ ತನಗೇನೂ ತಿಳಿದಿಲ್ಲ ಎಂಬಂತೆ ವರ್ತಿಸುತ್ತಿರುವದು ಹಾಗೂ ವಿರೋಧ ಪಕ್ಷದವರು ಕೂಡ ಸಮಸ್ಯೆಯ ಬಗ್ಗೆ ಚಕಾರವೆತ್ತದಿರು ವದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಸಿದ್ದಾಪುರ ಗ್ರಾ.ಪಂ. ಕಸ ವಿಲೇವಾರಿಯ ನೆಪದಲ್ಲಿ ಪ್ರತಿ ತಿಂಗಳು ಕಸ ವಿಲೇವಾರಿ ಮಾಡುವ ವಾಹನಕ್ಕೆ ಸಾವಿರಾರು ರೂಪಾಯಿ ಹಣವನ್ನು ವ್ಯಯಿಸುತ್ತಿದ್ದರೂ, ಕಸ ಪಟ್ಟಣದಲ್ಲೇ ರಾಶಿಯಾಗಿ ಬಿದ್ದಿರುವದು ಕೆಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಮತ ಪಡೆದು ಆಯ್ಕೆಯಾದ ನೂತನ ಆಡಳಿತ ಮಂಡಳಿ ಕೂಡ ರಾಜಕೀಯ ಕಚ್ಚಾಟದಲ್ಲಿ ತೊಡಗಿದ್ದು, ಅಭಿವೃದ್ಧಿ ಯನ್ನು ಮರೆತಂತಿದೆ. ಸಾಮಾನ್ಯ ಸಭೆಗಳಲ್ಲಿ ಗಂಭೀರ ವಿಷಯವಾದ ಕಸ ವಿಲೇವಾರಿಯ ಬಗ್ಗೆ ಚರ್ಚಿಸುವ ಬದಲು ತಮ್ಮ ಸ್ವಾರ್ಥ ಲಾಭಕ್ಕಾಗಿ ವೈಯಕ್ತಿಕ ವಿಚಾರಗಳಲ್ಲೇ ಕಾಲ ಹರಣ ಮಾಡುತ್ತಿದೆ ಎಂದು ಕೆಲ ಗ್ರಾಮಸ್ಥರು ದೂರಿದ್ದಾರೆ.

ಗ್ರಾ.ಪಂ. ಮುಂಭಾಗ ಗೋಡೆಗಳಿಗೆ ಸುಣ್ಣ ಬಳಿದಿದ್ದು, ಮುಖ್ಯವಾಗಿ ಆಗಬೇಕಾದ ಮೇಲ್ಛಾವಣಿಯ ದುರಸ್ತಿ ಹಲವು ಗ್ರಾಮ ಸಭೆಗಳಲ್ಲಿ ಪ್ರಸ್ತಾಪಿಸಿದರೂ ಇನ್ನೂ ಕೂಡ ದುರಸ್ತಿ ಕಾಣಲಿಲ್ಲ. ಗ್ರಾ.ಪಂ. ಮುಂಭಾಗ ಸಾವಿರಾರು ರೂ. ಹಣ ವ್ಯಯಿಸಿ ಇಂಟರ್‍ಲಾಕ್ ಅಳವಡಿಸಲಾಗಿದ್ದು, ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ‘ಹೊಟ್ಟೆಗೆ ಹಿಟ್ಟಿಲ್ಲ- ಜುಟ್ಟಿಗೆ ಮಲ್ಲಿಗೆ’ ಎಂಬಂತೆ ಪ್ರಮುಖ ಸಮಸ್ಯೆಯಾದ ಕಸ ವಿಲೇವಾರಿಗೆ ಪರಿಹಾರ ಕಂಡುಕೊಳ್ಳದೆ ಗ್ರಾ.ಪಂ.ನ್ನು ಅಂದವಾಗಿಸಲು ಲಕ್ಷಾಂತರ ರೂ. ಹಣವನ್ನು ವ್ಯಯಿಸಿರುವದು ಕೂಡ ಗ್ರಾಮಸ್ಥರ ಟೀಕೆಗೆ ಗುರಿಯಾಗಿದೆ.

ಕಸ ವಿಲೇವಾರಿಗೆ ಸೂಕ್ತ ಜಾಗ ನೀಡದಿದ್ದಲ್ಲಿ ಸಿದ್ದಾಪುರ ಪಟ್ಟಣ ಬಂದ್ ಮಾಡುವದಾಗಿ ಘೋಷಿಸಿ, ಕೊನೆಗೆ ಬಂದ್‍ನ್ನು ಹಿಂಪಡೆದು ಕೊಂಡ ಗ್ರಾ.ಪಂ. ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಮಾಡುತ್ತಿದೆ ಎಂಬದು ಸ್ಥಳೀಯರ ವಾದ.

ಜಿಲ್ಲೆಯು ಪ್ರವಾಸಿ ತಾಣವಾಗಿದ್ದು, ಸಿದ್ದಾಪುರಕ್ಕೆ ಆಗಮಿಸುವ ಪ್ರವಾಸಿಗರಿಗೆ ಕೊಳೆತ ವಾಸನೆಯೊಂದಿಗೆ ಅದ್ಧೂರಿ ಸ್ವಾಗತ ನೀಡಲಾಗುತ್ತಿದೆ. ಅಭಿವೃದ್ಧಿಯೇ ಧ್ಯೇಯಗುರಿ ಎಂದು ಅಧಿಕಾರ ಸ್ವೀಕರಿಸಿದ ಅಭಿವೃದ್ಧಿ ಅಧಿಕಾರಿ ಇದೀಗ ಮಂಕಾಗಿದ್ದು, ಕಸದ ವಿಲೇವಾರಿಗೆ ಶಾಶ್ವತ ಜಾಗವನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ವಿರೋಧ ಪಕ್ಷದ ಸದಸ್ಯರುಗಳಿಗೆ ಆರಂಭದಲ್ಲಿದ್ದ ಆಸಕ್ತಿ ಕುಗ್ಗಿದ್ದು, ಗ್ರಾ.ಪಂ.ನಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ. ಸಾಮಾನ್ಯ ಸಭೆಗಳಲ್ಲಿ ಪ್ರಶ್ನಿಸಬೇಕಾದ ವಿರೋಧ ಪಕ್ಷ ಸ್ವತಃ ಆಡಳಿತ ಪಕ್ಷವನ್ನು ಸಂರಕ್ಷಿಸುತ್ತಿದೆ. ಗ್ರಾ.ಪಂ. ಅಧ್ಯಕ್ಷರು ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದು, ಅಭಿವೃದ್ಧಿಯ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿಲ್ಲ ಎಂದು ಸಿ.ಪಿ.ಐ. (ಎಂ) ಮುಖಂಡ ಅನಿಲ್ ಕುಟ್ಟಪ್ಪ ಆರೋಪಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ಕಾವೇರಿ ನದಿ ಸಮೀಪ ಕಸ ವಿಲೇವಾರಿ ಮಾಡಲಾಗುತ್ತಿರುವದು ಖಂಡನೀಯ. ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿರುವ ಸರಕಾರಿ ಭೂಮಿಯನ್ನು ವಶಪಡಿಸುವ ತಾಕತ್ತು ಗ್ರಾ.ಪಂ.ಗೆ ಇಲ್ಲ. ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಹೋರಾಟ ಮಾಡಲಾಗು ವದು ಎಂದು ಪಿ.ಆರ್. ಭರತ್ ಹೇಳಿದ್ದಾರೆ. - ಎ.ಎನ್. ವಾಸು