ಒಡೆಯನಪುರ, ಜ. 9: ಶಿಕ್ಷಣ ಸಂಸ್ಕಾರದ ಅವಿಭಾಜ್ಯ ಅಂಗವಾಗಿದೆ ಎಂದು ತುಮಕೂರು ಸಿದ್ದಲಿಂಗ ಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೊಡ್ಲಿಪೇಟೆ ಸಮೀಪದ ಕಲ್ಲುಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢಶಾಲೆಯ 2016-17ನೇ ಸಾಲಿನ ವಾರ್ಷಿಕೋತ್ಸವ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣದಿಂದ ಜ್ಞಾನ ಮತ್ತು ಸಂಸ್ಕಾರದ ಸಂಪಾದನೆ ಹೆಚ್ಚಾಗುತ್ತದೆ. ಪ್ರತಿಯೊಬ್ಬರಿಗೂ ಶಿಕ್ಷಣದ ಅವಶ್ಯಕತೆಯಿರುತ್ತದೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಜ್ಞಾನ, ಸಂಸ್ಕಾರದ ಮಟ್ಟವನ್ನು ಹೆಚ್ಚಿಸಬೇಕೆಂದರು.
ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು ಮಾತನಾಡಿ, ಶಿಕ್ಷಣವನ್ನು ಉತ್ತೇಜಿಸುವದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ. ವಿಜ್ಞಾನ-ತಂತ್ರಜ್ಞಾನ, ಕಲೆ-ಸಾಹಿತ್ಯ ಮುಂತಾದ ಕ್ಷೇತ್ರಗಳ ಉನ್ನತಿಗೂ ಶಿಕ್ಷಣವೇ ಕಾರಣವಾಗಿದೆ. ಈ ದಿಸೆಯಲ್ಲಿ ಪೋಷಕರು ತಮ್ಮ ಮಕ್ಕಳ ಆಸಕ್ತಿಗೆ ತಕ್ಕಂತೆ ವಿದ್ಯಾಭ್ಯಾಸ ಕೊಡಿಸಬೇಕು ಎಂದರು. ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ-ಹಣ, ಸಂಪತ್ತನ್ನು ಕೊಡುಗೆಯಾಗಿ ನೀಡುವದರ ಬದಲು ಶಿಕ್ಷಣದ ಸಂಪತ್ತನ್ನು ಕೊಡುಗೆಯಾಗಿ ನೀಡಿದರೆ ಮುಂದೆ ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಹ್ಯಾಂಡ್ಪೋಸ್ಟ್ ಮಜ್ದಿದುನ್ನೂರು ಮಸೀದಿಯ ಸೂಫಿ ಧರಿಮಿ, ಗೋಪಾಲಪುರ ಚರ್ಚ್ನ ಫಾ. ದೇವಿಡ್ ಸಾಗಯಾರ್ಜ್ ಇದ್ದರು. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ ಮತ್ತು ಪೋಷಕರಿಗೆ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು. ಶಾಲಾ ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ವಿಜ್ಞಾನ ಮತ್ತು ಕಲಾಕೃತಿಗಳ ಮಾದರಿ ಪ್ರದರ್ಶನವನ್ನು ಏರ್ಪಡಿಸಲಾಯಿತು.
- ವಿ.ಸಿ. ಸುರೇಶ್ ಒಡೆಯನಪುರ