ಕುಶಾಲನಗರ, ನ. 9: ಕರ್ನಾಟಕ ಏಕೀಕರಣ ವಜ್ರ ಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ ಸಂಚರಿ ಸುತ್ತಿರುವ ಕರ್ನಾಟಕ ಏಕೀಕರಣ ರಥ ಮಂಗಳವಾರ ಮೈಸೂರು ಜಿಲ್ಲೆಯಿಂದ ಜಿಲ್ಲೆಗೆ ಆಗಮಿಸಿತು. ಜಿಲ್ಲೆಗೆ ಆಗಮಿಸಿದ ಸ್ತಬ್ಧ ಚಿತ್ರದ ರಥವನ್ನು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಕೊಪ್ಪ ಕಾವೇರಿ ಪ್ರತಿಮೆ ಬಳಿ ಬರಮಾಡಿಕೊಂಡರು. ರಥದಲ್ಲಿ ಅಳವಡಿಸಿದ್ದ ಕನ್ನಡಾಂಭೆಗೆ ಮಾಲಾರ್ಪಣೆಗೈದು ನಮನ ಸಲ್ಲಿಸಿದರು.

ನಂತರ ಕುಶಾಲನಗರಕ್ಕೆ ಧಾವಿಸಿದ ರಥವನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಬರಮಾಡಿ ಕೊಂಡರು. ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್ ಕನ್ನಡಾಂಭೆಗೆ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದೆ. ಇತರ ಭಾಷೆಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನ್ನಡದ ಉಳಿವಿಗೆ ಕನ್ನಡಿಗರು ಪಣ ತೊಡಬೇಕಿದೆ ಎಂದರು.

ಕೊಪ್ಪ ಗಡಿಭಾಗದಲ್ಲಿ ರಥವನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕನ್ನಡ ಸಾಹಿತ್ಯ ಪರಿಷತ್‍ನ ಪ್ರಮುಖರಾದ ಹೆಚ್.ಹೆಚ್. ಸುಂದರ್, ಕೆ.ಕೆ. ನಾಗರಾಜಶೆಟ್ಟಿ, ಅಶ್ವಥ್, ಸಬಲಂ ಭೋಜಣ್ಣ ರೆಡ್ಡಿ, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ದಲಿತ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಡಿ.ಅಣ್ಣಯ್ಯ, ರವಿಚಂದ್ರನ್ ಕನ್ನಡ ಸಂಘದ ಬಬೀಂದ್ರ ಪ್ರಸಾದ್ ಮೊದಲಾದವರು ಬರಮಾಡಿ ಕೊಂಡರು. ಪಟ್ಟಣ ಕುಶಾಲನಗರ ಗಣಪತಿ ದೇವಾಲಯದ ಬಳಿ ಪಂಚಾಯಿತಿ ಸದಸ್ಯರಾದ ಹೆಚ್.ಡಿ. ಚಂದ್ರು, ರಶ್ಮಿ, ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮತ್ತಿತರ ಪ್ರಮುಖರು ರಥವನ್ನು ಕುಶಾಲನಗರದಿಂದ ಮಡಿಕೇರಿ ಕಡೆಗೆ ರಥದೊಂದಿಗೆ ಆಗಮಿಸಿದ ಪ್ರತಿರೂಪಿ ಸಂಸ್ಥೆಯ ಆನಂದ್ ನೇತೃತ್ವದ ತಂಡವನ್ನು ಬೀಳ್ಕೊಟ್ಟರು. ಈ ಸಂದರ್ಭ ಕಲಾವಿದ ಇ.ರಾಜು ನೇತೃತ್ವದ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ತಂಡದವರಿಂದ ಕನ್ನಡ ನಾಡು, ನುಡಿ, ಇತಿಹಾಸ ಸಾರುವ ಗೀತೆಗಳು ಮೊಳಗಿದವು.