ಸೋಮವಾರಪೇಟೆ, ಡಿ.19: ಅಕ್ರಮವಾಗಿ ಕೊಡಗಿಗೆ ನುಗ್ಗಿ ತೋಟದ ಲೈನ್‍ಮನೆಗಳಲ್ಲಿ ನೆಲೆನಿಂತಿರುವ ಬಾಂಗ್ಲಾ ದೇಶೀಯರನ್ನು ಜಿಲ್ಲೆಯಿಂದ ಹೊರದಬ್ಬದಿದ್ದರೆ ಶೀಘ್ರದಲ್ಲೇ ಕೊಡಗು ತಾಲಿಬಾನ್ ಆಗಲಿದೆ ಎಂದು ಕೊಡಗು ಪ್ರಜಾರಂಗದ ಜಿಲ್ಲಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಎಚ್ಚರಿಕೆ ನೀಡಿದರು.ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಮರಳು ಸಮಸ್ಯೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಮರಳು ಸಮಸ್ಯೆಯಿಂದ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಒಂದೋ ಸರ್ಕಾರವೇ ಮರಳು ವಿತರಿಸಬೇಕು; ಇಲ್ಲವೇ ಯಾರು ಬೇಕಾದರೂ ಮರಳು ಸಾಗಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಮಾತನಾಡಿ, ಕಾರ್ಮಿಕರ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿ ಗಳಿಗೆ ಕಾಳಜಿಯಿಲ್ಲ. ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಬೀದಿಪಾಲು ಮಾಡಲಾಗಿದೆ. ಜಿಲ್ಲೆಗೆ ನಾಲ್ಕು ಸಚಿವರು ಬಂದರೂ ಆದಿವಾಸಿಗಳ ಸಮಸ್ಯೆ ಬಗೆಹರಿದಿಲ್ಲ. ಇದರೊಂದಿಗೆ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಗಡಿ ನುಸುಳಿ ಬಂದು, ಅಸ್ಸಾಮಿನಲ್ಲಿ ಗುರುತಿನ ಚೀಟಿ ಪಡೆದವರು ಇಂದು ಕೊಡಗಿಗೆ ಆಗಮಿಸಿ ಸ್ಥಳೀಯ ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆ ಅಧಿಕವಾಗಿ ಮೂಲನಿವಾಸಿಗಳೇ ಪರಕೀಯ ರಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ರೂಪ ಸುರೇಶ್, ಕಾರ್ಮಿಕ ಘಟಕದ ಅಧ್ಯಕ್ಷ ಮೋಹನ್, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರವೀಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಮಿಕ ಸಂಘಟನೆಯ ಹೋರಾಟಗಾರರು ಉಪಸ್ಥಿತರಿದ್ದರು.