ಸೋಮವಾರಪೇಟೆ, ಜ. 19: ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ 58ನೇ ಮಹಾರಥೋತ್ಸವದ ಪ್ರಯುಕ್ತ ಕುಮಾರಲಿಂಗೇಶ್ವರ ಯುವ ಸಂಘ ಆಯೋಜಿಸಿದ್ದ ಅಂತರ್ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ತೋಳೂರುಶೆಟ್ಟಳ್ಳಿಯ ಸೂರ್ಯೋದಯ ಯುವಕ ಸಂಘ ಪ್ರಥಮ ಬಹುಮಾನವಾಗಿ 25 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಕುಶಾಲನಗರದ ಜೆಬಿಎಸ್‍ಸಿ ತಂಡ ದ್ವಿತೀಯ, ತೋಳೂರುಶೆಟ್ಟಳ್ಳಿಯ ಸೂರ್ಯೋದಯ ಯುವಕ ಸಂಘ ‘ಬಿ’ ತಂಡ ತೃತೀಯ ಹಾಗೂ ತಲ್ತಾರೆಶೆಟ್ಟಳ್ಳಿಯ ನವರತ್ನ ಯುವಕ ಸಂಘ ಚತುರ್ಥ ಬಹುಮಾನವನ್ನು ಪಡೆಯಿತು.

ಥ್ರೋಬಾಲ್ ಪಂದ್ಯಾಟದಲ್ಲಿ ಮದೆನಾಡಿನ ಮಲೆ ಮಹದೇಶ್ವರ ತಂಡ ಪ್ರಥಮ ಹಾಗೂ ಶಾಂತಳ್ಳಿಯ ಕುಮಾರಲಿಂಗೇಶ್ವರ ಯುವತಿ ಮಂಡಳಿ ದ್ವಿತೀಯ ಬಹುಮಾನ ಪಡೆಯಿತು.

ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಯಲ್ಲಿ ಬೆಟ್ಟದಳ್ಳಿ ರವಿ ಪ್ರಥಮ, ಜಕ್ಕನಳ್ಳಿಯ ಎಸ್.ಎ. ಜೋಯಪ್ಪ ದ್ವಿತೀಯ ಹಾಗೂ ಬೇಕನಳ್ಳಿಯ ಬಿ.ಎಲ್. ಶಬರಿ ತೃತೀಯ ಬಹುಮಾನ ಪಡೆದರು.

ಶಾಂತಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ತೀರ್ಪುಗಾರರಾಗಿ ತೋಳೂರುಶೆಟ್ಟಳ್ಳಿಯ ಎಸ್.ಬಿ. ರಾಜಪ್ಪ, ಗೌಡಳ್ಳಿಯ ಪ್ರವೀಣ್, ಹಂಡ್ಲಿಯ ಕೃಷ್ಣ, ಜ್ಞಾನಗಂಗಾ ಶಾಲೆಯ ಕೆ.ಬಿ. ಸತೀಶ್, ಕೂಡಿಗೆಯ ಎ.ಎಂ. ಆನಂದ, ಯಡೂರಿನ ಡಿ.ಸಿ. ಕುಶಾಲಪ್ಪ, ತಾಕೇರಿಯ ಅಮೃತ್, ಯಡೂರು ಮಲ್ಲಪ್ಪ ಹಾಗೂ ತಲ್ತಾರೆಶೆಟ್ಟಳ್ಳಿಯ ಬಿದ್ದಪ್ಪ ಕಾರ್ಯನಿರ್ವಹಿಸಿದ್ದರು.

ಸಂಘದ ಅಧ್ಯಕ್ಷ ಬಿ.ಡಿ. ನಿರಂಜನ್ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಆರಕ್ಷಕ ಉಪನಿರೀಕ್ಷಕ ಶಿವಣ್ಣ, ಗ್ರಾಮ ಸಮಿತಿ ಅಧ್ಯಕ್ಷ ಡಿ.ಎಸ್. ಲಿಂಗರಾಜ್, ದೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ರಘುಕುಮಾರ್, ಯುವಕ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್. ಉತ್ತಯ್ಯ, ಪ್ರಮುಖರಾದ ಗಿರೀಶ್ ಮಲ್ಲಪ್ಪ, ನತೀಶ್ ಮಂದಣ್ಣ ಅವರುಗಳು ಬಹುಮಾನ ವಿತರಿಸಿದರು.