ಸೋಮವಾರಪೇಟೆ, ಜ.2: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ಕುಶಾಲನಗರದಲ್ಲಿ ನಡೆಸಲಾಗುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೋಮವಾರಪೇಟೆಯ ಹಿರಿಯ ಸಾಹಿತಿ ಎಸ್.ಸಿ. ರಾಜಶೇಖರ್ ಅವರನ್ನು ಕಸಾಪ ಪದಾಧಿಕಾರಿಗಳು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನ ನೀಡಿದರು.ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಸೇರಿದಂತೆ ಪದಾಧಿಕಾರಿಗಳು ಇಲ್ಲಿನ ಬಸವೇಶ್ವರ ರಸ್ತೆಯಲ್ಲಿರುವ ರಾಜಶೇಖರ್ ಅವರ ಮನೆಗೆ ತೆರಳಿ, ಹೂವಿನ ಹಾರದೊಂದಿಗೆ ಫಲತಾಂಬೂಲ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.
ತಾ. 10 ಮತ್ತು 11 ರಂದು ಕುಶಾಲನಗರದ ರೈತ ಸಮುದಾಯ ಭವನದಲ್ಲಿ ಆಯೋಜನೆಗೊಂಡಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕಸಾಪ ಪದಾಧಿಕಾರಿಗಳೊಂದಿಗೆ ಕನ್ನಡಪರ ಸಂಘಟನೆಗಳು, ಸಾಹಿತ್ಯಾಸಕ್ತರು, ಭಾಷಾಭಿಮಾನಿಗಳು ಸಹಕರಿಸಬೇಕು ಎಂದು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾ ಘಟಕದ ಖಜಾಂಚಿ ಎಸ್.ಎ. ಮುರಳೀಧರ್, ನಿರ್ದೇಶಕರಾದ ನಾಗರಾಜ್ ಶೆಟ್ಟಿ, ಎಸ್.ಪಿ. ಪ್ರಸನ್ನ, ನಂಜುಂಡಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಹೆಚ್.ಜೆ. ಜವರ, ಕಾರ್ಯದರ್ಶಿ ಎಸ್.ಡಿ. ವಿಜೇತ್, ಖಜಾಂಚಿ ಡಿ.ಪಿ. ಲೋಕೇಶ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.