ಕೂಡಿಗೆ, ನ. 21: ಸರ್ವ ಜನಾಂಗದ ಶಾಂತಿಯ ತೋಟ ಎಂಬ ಪರಿಕಲ್ಪನೆಯ ಮೂಲಕ ವಿಶ್ವ ಮಾನವತೆಯನ್ನು ಪ್ರತಿಪಾದಿಸಿದ ಕನ್ನಡ ಸಾಹಿತ್ಯ ಚರಿತ್ರೆ ವಿಶ್ವದ ಚರಿತ್ರೆಯಲ್ಲೇ ಶ್ರೇಷ್ಠವಾದುದು ಎಂದು ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಅಭಿಪ್ರಾಯ ಪಟ್ಟರು.

ಚಿಕ್ಕ ಅಳುವಾರದ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ 61ನೇ ಕನ್ನಡ ರಾಜ್ಯೋತ್ಸವ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡ ಗೀತೆಯು ಸರ್ವ ಸಮಾನತೆಯ ಸಂವೇದನೆ ಯನ್ನು ಒಳಗೊಂಡಿದ್ದು ಜಾತ್ಯತೀತ ನಿಲುವನ್ನು ಹಾಗೂ ಅಖಂಡತೆಯ ಪರಿಕಲ್ಪನೆಯನ್ನು ಪ್ರತಿಪಾದಿಸಿದಂತಹ ಶ್ರೀಮಂತ ಭಾಷೆಯಾಗಿದೆ. ಕನ್ನಡದ ಮೊಟ್ಟ ಮೊದಲ ಲಾಕ್ಷಣಿಕ ಗ್ರಂಥ ಕವಿರಾಜಮಾರ್ಗ ಕೃತಿಯಲ್ಲಿ ಕೊಡಗಿನ ಕಾವೇರಿಯಿಂದ ಗೋಧಾವರಿವರೆಗೂ ಕನ್ನಡ ನಾಡು ವಿಸ್ತರಿಸಿತ್ತು ಎಂಬದನ್ನು ಉಲ್ಲೇಖಿಸಲಾಗಿದೆ. ಇಂತಹ ಕೊಡಗಿನ ಪ್ರಕೃತಿಯ ಮಡಿಲಲ್ಲಿ ಜನಿಸಿದ ನವೋದಯ ಪಂಥದ ಕೊಡಗಿನ ಗೌರಮ್ಮ ವಿಶ್ವದ ಶ್ರೇಷ್ಠ ಕ್ರಿಯಾಶೀಲ ಬರಹಗಾರ್ತಿಯರಲ್ಲಿ ಒಬ್ಬರು. ಸಾಮಾಜಿಕ ಮೌಲ್ಯಗಳನ್ನು ತಮ್ಮ ಬರಹಗಳ ಮೂಲಕ ಅಭಿವ್ಯಕ್ತ ಪಡಿಸಿದ ಇವರು ತಮ್ಮ ಕಥೆಗಳಲ್ಲಿ ಇಡೀ ಮನುಕುಲ ಒಂದೇ ಎಂಬದನ್ನು ಕುರಿತು ಅರಿವು ಮೂಡಿಸಿದವರು.

ತನ್ನ ತಪ್ಪುಗಳನ್ನು ತಿದ್ದಿಕೊಂಡು ನಡೆಯುವವ ನಿಜವಾದ ಕವಿಯಾಗು ತ್ತಾನೆ. ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳು, ಕುವೆಂಪು ಮತ್ತು ಶಿವರಾಮ ಕಾರಂತರ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಉತ್ತಮ ಸಮಾಜದ ನಿರ್ಮಾಣ ಮುಕ್ತ ಮನಸ್ಸಿನ ಚಿಂತನೆಯಿಂದ ಮಾತ್ರ ಸಾಧ್ಯ. ನಮ್ಮಲ್ಲಿ ಹೊಟ್ಟೆಪಾಡಿನ ಕನ್ನಡಿಗರು ಹೆಚ್ಚಾಗುತ್ತಿದ್ದಾರೆ. ಭ್ರಷ್ಟತೆ ಮತ್ತು ತಾರತಮ್ಯತೆಯನ್ನು ಹೋಗಲಾಡಿಸಿ ಸಮಾನತೆಯನ್ನು ಪ್ರತಿಪಾದಿಸುವ ಪ್ರಗತಿಪರ ಸಮಾಜದ ನಿರ್ಮಾಣ ಮಾಡುವ ಕನಸು ನಮ್ಮದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಿಕ್ಕ ಅಳುವಾರದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ವಿ. ರವೀಂದ್ರಾಚಾರಿ ಮಾತನಾಡಿ, ಕನ್ನಡ ನಾಡು ಭಾಷೆ, ಉತ್ಕøಷ್ಟ ಸಾಹಿತ್ಯ ಹಾಗೂ ಶಿಲ್ಪಕಲೆಗಳನ್ನು ಹೊಂದಿದ ಶ್ರೀಮಂತ ನಾಡು. ಒಳ್ಳೆಯ ಸಮಾಜದ ನಿರ್ಮಾಣ ಮಾಡುವ ಶಕ್ತಿ ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕಿದೆ. ಮಾನವೀಯತೆಗೆ ಮೊದಲ ಪ್ರಾಶಸ್ತ್ಯ ನೀಡುವ ನಮ್ಮ ಕನ್ನಡ ಭಾಷೆಗೆ ಸಹಿಷ್ಣುತೆಯ ಮನೋಭಾವವನ್ನು ಪ್ರತಿಪಾದಿಸುತ್ತದೆ. ಇಂತಹ ಭಾಷೆಯನ್ನು ಮಾತನಾಡಿದರೆ ಅಪಮಾನವಾಗುತ್ತದೆಂಬ ಮನಸ್ಥಿತಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಒಂದು ಜನಾಂಗದ ಭಾಷೆಯನ್ನು ಬಳಸಿದರೆ ಆ ನಾಡಿನ ಶ್ರೀಮಂತಿಕೆ ಹೆಚ್ಚಾಗುತ್ತದೆ ಎಂಬದನ್ನು ಪ್ರತಿಯೊಬ್ಬರು ಮನಗಾಣಬೇಕು ಎಂದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಾಂಸ್ಕøತಿಕ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಪ್ರೊ. ಜಯಶಂಕರ್, ಗಣಕ ವಿಭಾಗದ ನಿರ್ದೇಶಕ ಪ್ರೊ. ನಂಜನಗೂಡು, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಶ್ರೀನಾಥ್, ಕನ್ನಡ ವಿಭಾಗದ ಮತ್ತು ವಿವಿಧ ವಿಭಾಗದ ಉಪನ್ಯಾಸಕ ವರ್ಗ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.