ವೀರಾಜಪೇಟೆ, ಅ. 24: ಕೊಡಗು ಕೇರಳ ಗಡಿ ಭಾಗದಲ್ಲಿರುವ ವೀರಾಜಪೇಟೆಯ ಕರ್ನಾಟಕ ಸಂಘದ ವತಿಯಿಂದ 61ನೇ ಕನ್ನಡÀ ರಾಜ್ಯೋತ್ಸವವನ್ನು ಆಚರಿಸಲು ಪೂರ್ವ ಸಿದ್ಧತೆ ನಡದಿದೆ ಎಂದು ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ತಿಳಿಸಿದರು.

ಕರ್ನಾಟಕ ಸಂಘದ ವತಿಯಿಂದ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನ. 1ರಂದು ಬೆಳಿಗ್ಗೆ 9ಗಂಟೆಗೆ ತಾಲೂಕು ತಹಶೀಲ್ದಾರ್ ಮಹಾದೇವಸ್ವಾಮಿ ಅವರಿಂದ ಧ್ವಜಾರೋಹಣ, ಗೌರವ ರಕ್ಷೆ ಸ್ವೀಕಾರ ನಡೆಯಲಿದೆ. ತಾ. 2ರಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ಶಾಸಕ ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ, ಸಮಾಜ ಸೇವಕರು ಹಾಗೂ ಕಾಫಿ ಬೆಳೆಗಾರರಾದ ಮೇರಿಯಂಡ ಸಂಕೇತ್ ಪೂವಯ್ಯ ಭಾಗವಹಿಸಲಿದ್ದಾರೆ. ಇದೇ ಸಮಾರಂಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮುಲ್ಲೆಂಗಡ ಶಂಕರಿಪೊನ್ನಪ್ಪ, ಶಿಕ್ಷಕಿ ಜಾಜಿ, ರಾಷ್ಟ್ರಮಟ್ಟದ ಹಾಕಿ ಆಟಗಾರ ಚೇಂದಂಡ ಬೋಪಣ್ಣ ಇವರುಗಳನ್ನು ಸನ್ಮಾನಿಸಲಾಗುವದು ಎಂದರು.

ಸಂಘದ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ ಮಾತನಾಡಿ ಇಲ್ಲಿನ ಪುರಭವನದಲ್ಲಿ ನಡೆಯುವ ಸಮಾರಂಭದ ನಂತರ ಶಾಲಾ, ಕಾಲೇಜು, ಸಾರ್ವಜನಿಕರು, ಸ್ತ್ರೀ ಶಕ್ತಿ, ಸ್ವಸಹಾಯ ಗುಂಪಿನವರಿಗೂ ಕನ್ನಡ ಹಾಡಿನ ನೃತ್ಯ, ದೇಶಭಕ್ತಿ ಗೀತೆಗಳ ಸಮೂಹ ನೃತ್ಯ, ಜಾನಪದ ಗೀತೆ ಮತ್ತು ಚಲನಚಿತ್ರಗೀತೆ, ಪ್ರಾಥಮಿಕ ಶಾಲಾ ವಿಭಾಗಕ್ಕೆ ಛದ್ಮವೇಶ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳಿಗೆ ಮೊ:9448896141ನ್ನು ಸಂಪರ್ಕಿಸ ಬಹುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಪುಗ್ಗೇರ ನಂದ ಸುಬ್ಬಯ್ಯ, ಚಿಲ್ಲವಂಡ ಕಾವೇರಪ್ಪ, ಕೋಟೇರ ಗಣೇಶ ತಮ್ಮಯ್ಯ, ಅಪ್ಪನೆರವಂಡ ಜೋಯಪ್ಪ, ಕುಸುಮಾ ಸೋಮಣ್ಣ, ರಾಣು ಮಂದಣ್ಣ, ಮುಲ್ಲೆಂಗಡ ಅಶೋಕ್ ಉಪಸ್ಥಿತರಿದ್ದರು.