ಶನಿವಾರಸಂತೆ, ಜೂ. 15: ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕಗಳು ತಿಂಗಳಿಗೊಂದಾದರೂ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು.
ಸಮೀಪದ ಕೊಡ್ಲಿಪೇಟೆಯ ಕಾವೇರಿ ಗ್ರಾಮೀಣ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಸಾಪ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಪಿಯು ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 1 ಗ್ರಾಂ ಚಿನ್ನದ ನಾಣ್ಯ ಬಹುವಕೊಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಶಶಿಭೂಷಣ್ ಮಾತನಾಡಿ, ಕನ್ನಡ ನಾಡು - ನುಡಿಯ ಬಗ್ಗೆ ಅಭಿಮಾನ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಷತ್ತಿನ ಅಭಿವೃದ್ಧಿ iÁನವಾಗಿ ಸಾಧಿಸಬಹುದು ಎಂದರು.
ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಬ್ದುಲ್ ರಬ್ ಮಾತನಾಡಿ, ಸರ್ವ ಸದಸ್ಯರ ವಿಶ್ವಾಸ ಹಾಗೂ ಸಹಕಾರದೊಂದಿಗೆ ಕನ್ನಡ ಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ಭರವಸೆ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷ ಜವರಪ್ಪ, ಹಿರಿಯ ಸಾಹಿತಿ ರಾಜಶೇಖರ್, ಮಾಧ್ಯಮ ಕಾರ್ಯದರ್ಶಿ ಅಶ್ವಥ್, ಜಿ.ಪಂ. ಮಾಜಿ ಅಧ್ಯಕ್ಷೆ ಹೆಚ್.ಬಿ. ಜಯಮ್ಮ, ಶನಿವಾರಸಂತೆ ಕಸಾಪ ಘಟಕದ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ, ಪ್ರಾಂಶುಪಾಲ ಎಂ.ಆರ್. ನಿರಂಜನ್ ಮಾತನಾಡಿದರು.
ಘಟಕದ ಪ್ರಧಾನ ಕಾರ್ಯದರ್ಶಿ ಬೆಸೂರು ಶಾಂತೇಶ್, ಕಾರ್ಯದರ್ಶಿ ಲಾವಣ್ಯ, ಖಜಾಂಚಿ ಶಾಂತಕುಮಾರ್, ಉಪನ್ಯಾಸಕರಾದ ವೀಣಾ, ಕವಿತಾ ಉಪಸ್ಥಿತರಿದ್ದರು. ಬೆಸೂರು ಶಾಂತೇಶ್ ಸ್ವಾಗತಿಸಿ, ನಿರೂಪಿಸಿದರು. ವೀಣಾ ವಂದಿಸಿದರು.