ಮಡಿಕೇರಿ, ಅ. 6: ಕೊಡಗಿನ ಬಹುತೇಕ ಗ್ರಾ.ಪಂ.ಗಳು ನೌಕರರಿಗೆ ಕನಿಷ್ಟ ವೇತನವನ್ನು ನೀಡದೆ 2016ರ ಆ. 4 ರಂದು ಸರಕಾರ ಹೊರಡಿಸಿರುವ ಆದೇಶವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಲ್ಲಂಘಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಕನಿಷ್ಟ ವೇತನ ಮತ್ತು ತುಟ್ಟಿ ಭತ್ಯೆ ನೀಡದೆ ಗ್ರಾಮ ಪಂಚಾಯಿತಿ ನೌಕರರನ್ನು ಸಂಕಷ್ಟಕ್ಕೆ ಸಿಲುಕಿಸುವ ಮೂಲಕ ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸ ಲಾಗುತ್ತಿದೆ ಎಂದು ಟೀಕಿಸಿದರು. ಗ್ರಾಮ ಪಂಚಾಯಿತಿ ನೌಕರರಿಗೆ 2016 ಆ.4 ರಿಂದಲೇ ಸರಕಾರ ಕನಿಷ್ಟ ವೇತನವನ್ನು ನಿಗದಿ ಮಾಡಿ ಆದೇಶ ಹೊರಡಿಸಿದ್ದರೂ, ಕೊಡಗಿನ 104 ಗ್ರಾಮ ಪಂಚಾಯಿತಿಗಳಲ್ಲಿ ಅರ್ಧದಷ್ಟು ಗ್ರಾಮ ಪಂಚಾಯಿತಿಗಳು ಸರ್ಕಾರದ ನಿಯಮವನ್ನು ಪಾಲಿಸುತ್ತಿಲ್ಲವೆಂದು ಆರೋಪಿಸಿದರು.
ಸರಕಾರ ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ಗಳಿಗೆ 12,520 ರೂ., ಸ್ವಚ್ಛತಾ ನೌಕರರಿಗೆ 13 ಸಾವಿರ ರೂ., ನೀರು ಗಂಟಿಗರಿಗೆ 11 ಸಾವಿರ ರೂ., ಸಹಾಯಕರಿಗೆ 10,800 ರೂ. ವೇತನವನ್ನು ನಿಗದಿ ಮಾಡಿತ್ತು. ರಾಜ್ಯದಲ್ಲಿ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಈ ಆದೇಶ ಪಾಲನೆಯಾಗುತ್ತಿದೆಯಾದರೂ ಕೊಡಗು ಜಿಲ್ಲೆಯಲ್ಲಿ ಮಾತ್ರ ಸರ್ಕಾರದ ಆದೇಶಕ್ಕೆ ಬೆಲೆÉಯೇ ಇಲ್ಲದಾಗಿದೆ ಎಂದು ಆರೋಪಿಸಿದರು.
ಸರ್ಕಾರ ಜಾರಿ ಮಾಡಿರುವ ನೂತನ ಆದೇಶದ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿಯೇ ಇಲ್ಲದಿರುವದು ವಿಪರ್ಯಾಸ ವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆಯೇ ಹೊರತು ಕಾರ್ಮಿಕರ ಬದುಕಿನ ಬಗ್ಗೆ ಕಾಳಜಿ ತೋರುತ್ತಿಲ್ಲ.
ಕನಿಷ್ಟ ವೇತನಕ್ಕೆ ಬೇಡಿಕೆ ಮುಂದಿಟ್ಟರೆ ವೇತನದ ಒಟ್ಟು ಪ್ರಮಾಣದ ಶೇ. 40ನ್ನು ಮೀರುತ್ತದೆ ಎನ್ನುವ ಕಾರಣವನ್ನು ನೀಡಲಾಗುತ್ತಿದ್ದು, ಅಧಿಕ ಆದಾಯ ಗಳಿಸುತ್ತಿರುವ ಗ್ರಾಮ ಪಂಚಾಯಿತಿಗಳು ಕೂಡ ಸರ್ಕಾರದ ನಿಯಮವನ್ನು ಪಾಲಿಸದೆ ನುಣುಚಿಕೊಳ್ಳುತ್ತಿವೆ. ಕನಿಷ್ಟ ವೇತನವನ್ನು ನೀಡದೆ ನಿಯಮಗಳನ್ನು ಉಲ್ಲಂಘಿಸುವ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳು ಹಾಗೂ ಪಿಡಿಓಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದ್ದರು ಮೇಲಧಿಕಾರಿಗಳು ಇದನ್ನು ಪಾಲಿಸುತ್ತಿಲ್ಲ.
ಕನಿಷ್ಟ ವೇತನ ನೀಡದ ಗ್ರಾಮ ಪಂಚಾಯಿತಿಗಳ ವಿರುದ್ಧ ಸಂಘದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳುವದಾಗಿ ತಿಳಿಸಿದರು. ಜಿಲ್ಲೆಯ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ಮತ್ತು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗಳಿಗೆ ಅಧಿಕ ಆದಾಯ ಬರುತ್ತಿದೆ. ಆದರೆ ಅಧಿಕಾರಿಗಳು ಕನಿಷ್ಟ ವೇತನ ನೀಡದೆ ಇರುವದರಿಂದ ತಾ. 6 ರಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಹಾಗೂ ತಾ. 7 ರಂದು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವದಾಗಿ ಪಿ.ಆರ್. ಭರತ್ ತಿಳಿಸಿದರು.
ಸರ್ಕಾರದ ನಿಯಮದಂತೆ ಕನಿಷ್ಟ ವೇತನ ಮತ್ತು ತುಟ್ಟಿ ಭತ್ಯೆಯನ್ನು ನೀಡುವದು, ಕಾರ್ಮಿಕ ನಿಯಮ ಉಲ್ಲಂಘಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವದು, ಗ್ರಾಮ ಪಂಚಾಯಿತಿ ಪಿಡಿಓ, ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ಸಂದರ್ಭ ಒತ್ತಾಯಿಸಲಾಗುವ ದೆಂದು ಅವರು ಹೇಳಿದರು.
ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುತ್ತಿರುವದು ಸ್ವಾಗತಾರ್ಹ.
ಕೇವಲ ಸಮಸ್ಯೆಗಳನ್ನಷ್ಟೇ ಆಲಿಸದೆ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಭರತ್ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೆನ್ನಪ್ಪ ಎ.ಎಂ. ಹಾಗೂ ಸದಸ್ಯ ಧನಂಜಯ್ ಉಪಸ್ಥಿತರಿದ್ದರು.