ಕುಶಾಲನಗರ, ನ. 3: ಕನಿಷ್ಟ ವೇತನ ಮತ್ತು ತುಟ್ಟಿ ಭತ್ಯೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮಪಂಚಾಯತ್ ನೌಕರರ ಸಂಘದ ನೇತೃತ್ವದಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ನೌಕರರು ಪಂಚಾಯಿಯಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.ಸಂಘದ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್.ಭರತ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರಕಾರದ ಆದೇಶದನ್ವಯ ಪಂಚಾಯಿತಿ ಸಿಬ್ಬಂದಿಗಳು ಹಾಗೂ ನೌಕರರಿಗೆ ಕನಿಷ್ಟ ವೇತನ ನೀಡಲು ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಪ್ರತಿಭಟನಾP Áರರು ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿದರು. ಪಂಚಾಯ್ತಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪಂಚಾಯ್ತಿ ಆವರಣದಲ್ಲಿ ಶಾಮಿಯಾನ ನಿರ್ಮಿಸಿ ಧರಣಿ ಸತ್ಯಾಗ್ರಹ ನಡೆಸಿದ ಪ್ರತಿಭಟನಾಕಾರರು ಕನಿಷ್ಟ ವೇತನ ನಿಗದಿಪಡಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪಂಚಾಯಿತಿ ಅಧ್ಯಕ್ಷೆ ಭವ್ಯ ಅವರಿಗೆ ಮನವಿ ಪತ್ರ ಮೂಲಕ ಒತ್ತಾಯಿಸಿದರು.

ಕನಿಷ್ಟ ವೇತನ ಒದಗಿಸುವಂತೆ ಆಗ್ರಹಿಸಿ ಈಗಾಗಲೆ ಪಂಚಾಯ್ತಿಗೆ ಎರಡು ಬಾರಿ ಮನವಿ ಮಾಡಲಾಗಿದೆ. ಪ್ರತಿಭಟನೆ ಎಚ್ಚರಿಕೆ ನೀಡಿದ ಸಂದರ್ಭ ಸೂಕ್ತ ಕ್ರಮಕೈಗೊಳ್ಳುವದಾಗಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದು ಕೊಳ್ಳಲಾಗಿತ್ತು. ಆದರೆ ಈವರೆಗೆ ಯಾವದೇ ರೀತಿಯ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹ ಕೈಗೊಂಡಿರುವದಾಗಿ ಭರತ್ ತಿಳಿಸಿದರು. ಪ್ರತಿಭಟನೆಯಲ್ಲಿ ಪಂಚಾಯ್ತಿ ಸಿಬ್ಬಂದಿಗಳಾದ ದಿವ್ಯ, ಪ್ರಕಾಶ್, ಪೌರಕಾರ್ಮಿಕರಾದ ಮುರುಗ, ನಾಗರಾಜು, ವೆಂಕಟೇಶ್, ಈಶ್ವರ, ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.