ಮಡಿಕೇರಿ, ನ. 18: ಕನಕದಾಸರು ಕನ್ನಡ ಕವಿಗಳಲ್ಲಿ ಹೆಚ್ಚು ಜೀವಪರವಾದ ಮತ್ತು ವಿಚಾರಪರ ಕವಿ ಎಂದು ಹಿರಿಯ ನ್ಯಾಯವಾದಿ ಮತ್ತು ಲೇಖಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅಭಿಪ್ರಾಯಪಟ್ಟರು.
ಮಡಿಕೇರಿ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಸಾಹಿತ್ಯಾಸಕ್ತರ ಬಳಗ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶಯ ನುಡಿಗಳನ್ನಾಡಿದರು. ಕನಕದಾಸರು ಯಾವದೇ ಜಾತಿಗೆ ಸೀಮಿತರಲ್ಲ. ಅವರು ಮಾನವೀಯತೆ ಯನ್ನು ಎತ್ತಿ ಹಿಡಿದವರು. ತಮ್ಮ ಹಿಂದಿನ ಕವಿಗಳ ಪ್ರಭಾವಕ್ಕೆ ಒಳಗಾದರೂ ಅವರ ಕಾವ್ಯ ಸರಳ ಮತ್ತು ಸುಲಲಿತ. ಅದು ಪ್ರತಿಮೆ- ಉಪಮೆಗಳ ಜಾಲದಲ್ಲಿ ಜನರಿಂದ ದೂರವಾದುದಲ್ಲ ಎಂದರು.
ಪ್ರಧಾನ ಭಾಷಣಕಾರರಾಗಿ ಪಾಲ್ಗೊಂಡ ಆಕಾಶವಾಣಿ ಮಡಿಕೇರಿ ಕೇಂದ್ರದ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಕನಕದಾಸರ ಜೀವನ ಮತ್ತು ಕಾವ್ಯ ಮನೋಧರ್ಮ ವನ್ನು ವಿವರಿಸಿ ತಾರತಮ್ಯ ರಹಿತ ಸಮಾಜದ ನಿರ್ಮಾಣದ ಆಶಯವನ್ನು 16ನೇ ಶತಮಾನದಲ್ಲೇ ಕನಕದಾಸರು ಕಂಡಿದ್ದರು ಎಂದು ಹೇಳಿದರು.
ಸಮಾನ ಮನಸ್ಕರ ಸಹಕಾರ ದೊಂದಿಗೆ ಈ ಕಾರ್ಯಕ್ರಮವನ್ನು ಹುಟ್ಟು ಹಾಕಿದ ಅನಂತ ಸುಬ್ಬರಾಯರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕನಕದಾಸರ ಕೀರ್ತನೆಗಳ ಗಾಯನ ನಡೆಯಿತು. ವಿದುಷಿ ಜಯಲಕ್ಷ್ಮಿ ರಮೇಶ್, ಶೋಭಾ ಭಟ್ ಮತ್ತು ಅನುಶ್ರೀ ಕೀರ್ತನೆಗಳನ್ನು ಹಾಡಿದರು.
ಮಡಿಕೇರಿ ಆಕಾಶವಾಣಿ ಕೇಂದ್ರದ ನಿರ್ದೇಶಕ ವಿದ್ವಾನ್ ಬಳ್ಳಾರಿ ಎಂ. ರಾಘವೇಂದ್ರ ಅವರ ಗಾಯನ ಕಾರ್ಯಕ್ರಮ ನಡೆಯಿತು. ಪಕ್ಕವಾದ್ಯದಲ್ಲಿ ಶ್ರೀಧರ್ (ಮೃದಂಗ) ಮತ್ತು ಚೇತನ್ (ವಯೋಲಿನ್) ಸಹಕರಿಸಿದರು. ವೀಣಾಂಬಾ ಪ್ರಾರ್ಥಿಸಿ, ಗೀತಾ ಗಿರೀಶ್ ಮತ್ತು ಸವಿತಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.