ಮಡಿಕೇರಿ, ಜು.30 : ಕಣ್ಣಂಗಾಲ ಗ್ರಾ.ಪಂ. ಅಧ್ಯಕ್ಷೆ ಎರವರ ಎಸ್.ಈಶ್ವರಿ ಅವರ ಮೇಲೆ ದೌರ್ಜನ್ಯ ನಡೆಸಿರುವ ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ವಿರುದ್ಧ ಮುಂದಿನ 10 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ ತೀವ್ರ ರೀತಿಯ ಹೋರಾಟ ನಡೆಸುವದಾಗಿ ಸಮಿತಿಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈ.ಎ.ರವಿ ಹಾಗೂ ವೈ.ಜೆ.ಸೋಮ ಅವರುಗಳು ಗೋಪಾಲಕೃಷ್ಣ ಅವರ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು. ಗ್ರಾ.ಪಂ. ಅಧ್ಯಕ್ಷೆ ಈಶ್ವರಿ ಅವರನ್ನು ಕೂಡಿ ಹಾಕಿ ಜೀತದಾಳುವಂತೆ ಗೋಪಾಲಕೃಷ್ಣ ದುಡಿಸಿಕೊಂಡಿದ್ದಾರೆ. ಈತ ಕಾಂಗ್ರೆಸ್ ಪಕ್ಷದ ಪ್ರಭಾವಿ ವ್ಯಕ್ತಿಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವದರಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ಸರ್ಕಾರ ಮತ್ತು ಪಕ್ಷದ ಒತ್ತಡಕ್ಕೆ ಮಣಿದು ಪೊಲೀಸರು ಗೋಪಾಲಕೃಷ್ಣ ಅವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ಜಿಲ್ಲೆಯ ಎಲ್ಲಾ ಬುಡಕಟ್ಟು ಜನರು ಒಗ್ಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾ.ಪಂ ಅಧ್ಯಕ್ಷರಿಗೇ ಈ ಪರಿಸ್ಥಿತಿಯಾದರೆ ಸಾಮಾನ್ಯ ಬುಡಕಟ್ಟು ಜನರ ಗತಿಯೇನು ಎಂದು ಪ್ರಶ್ನಿಸಿದ ಪದಾಧಿಕಾರಿಗಳು ಜಿಲ್ಲೆಯ ಲೈನ್ ಮನೆಗಳಲ್ಲಿ ವಾಸವಿರುವ ಗಿರಿಜನರ ಮೇಲೆ ಇಂದಿಗೂ ನಿತ್ಯ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.