ವೀರಾಜಪೇಟೆ, ಜು. 30: ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ.ಎಸ್.ಈಶ್ವರಿ ಎಂಬಾಕೆ ಯನ್ನು ದಿಗ್ಬಂಧನದಲ್ಲಿಟ್ಟು ದೌರ್ಜನ್ಯ ಹಾಗೂ ಅಧ್ಯಕ್ಷ ಸ್ಥಾನದ ಅಧಿಕಾರ ದುರುಪಯೋಗ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಭೇಟಿ ನೀಡಿ ಪಂಚಾಯಿತಿ ಕಾರ್ಯ ವೈಖರಿ ಇತರ ವಿದ್ಯಮಾನಗಳ ಕುರಿತು ಪರಿಶೀಲನೆ ನಡೆಸಿದರು.

ಪಂಚಾಯಿತಿ ಸದಸ್ಯ ಕೆ.ಎಸ್.ಗೋಪಾಲಕೃಷ್ಣ ಮಹಿಳಾ ಅಧ್ಯಕ್ಷೆ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಈಶ್ವರಿಯನ್ನು ವಿಚಾರಣೆ ನಡೆಸಿದರು. ಕಳೆದ ಒಂದು ವರ್ಷದಿಂದ ಈಶ್ವರಿ ಗೋಪಾಲಕೃಷ್ಣನ ದಿಗ್ಬಂಧನದಲ್ಲಿದ್ದುದು, ಆಕೆಯ ಮೇಲೆಸಗಿದ ದೌರ್ಜನ್ಯ, ಆಕೆಗೆ ಸೇರಿದ ಗೌರವ ವೇತನ ಭತ್ಯ ಪಡೆದಿದ್ದನ್ನು ವಿವರವಾಗಿ ಈಶ್ವರಿ ಹೇಳಿದರು. ಜೂನ್ ಹಾಗೂ ಜುಲೈ ತಿಂಗಳಿಗೆ ಸಭೆಗೆ ಹಾಜರಾದಾಗ ಮಾತ್ರ ವೇತನ ಭತ್ಯ ದೊರೆತಿದೆ. ಅಧ್ಯಕ್ಷ ಸ್ಥಾನದಲ್ಲಿರುವವರಿಗೆ ವೇತನ ಹಾಗೂ ಭತ್ಯ ದೊರೆಯುತ್ತದೆ ಎಂಬ ಮಾಹಿತಿ ತನಗೆ ತಿಳಿದಿರಲಿಲ್ಲ. ಮೂರು ತಿಂಗಳ ಹಿಂದೆ ಈಶ್ವರಿ ಹೆಸರಲ್ಲಿ ಬಂದ ರೂ 9,900 ಮೌಲ್ಯದ ಚೆಕ್‍ನ್ನು ಗೋಪಾಲಕೃಷ್ಣ ಡ್ರಾ ಮಾಡಿದ್ದಾರೆ. ಕಣ್ಣಂಗಾಲ ವಿಜಯಾಬ್ಯಾಂಕ್‍ನಲ್ಲಿ ಈಶ್ವರಿ ಹೆಸರಿನಲ್ಲಿ ಖಾತೆ ತೆರೆದಿದ್ದರೂ ಆಕೆಗೆ ಈ ತನಕ ಪಾಸ್ ಪುಸ್ತಕವಾಗಲ್ಲಿ ಎ.ಟಿ.ಎಂ ಕಾರ್ಡ್‍ನ್ನು ಕೊಟ್ಟಿಲ್ಲ. ಈಶ್ವರಿ ನಾಲ್ಕನೇ ತರಗತಿವರೆಗೆ ಓದಿದ್ದರೂ ಸಹಿ ಮಾಡಲು ಹಾಗೂ ಕನ್ನಡ ಭಾಷೆಯ ಬರಹಗಳನ್ನು ಓದಲು ಬರುತ್ತದೆ ಎಂದು ಈಶ್ವರಿ, ಪಂಚಾಯಿತಿ ಮಹಿಳಾ ಸದಸ್ಯರುಗಳ ಸಮ್ಮುಖದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂಣಚ್ಚ ಅವರು, ಒಂದು ವರ್ಷದಿಂದ ನಡೆದ ಪಂಚಾಯಿತಿ ಕಾರ್ಯ ವೈಖರಿ ಸದಸ್ಯ ಗೋಪಾಲಕೃಷ್ಣನ ವರ್ತನೆ ಬಗ್ಗೆ ವಿವರಣೆ ನೀಡಿದರು. ಗೋಪಾಲಕೃಷ್ಣನ ಮಾತನ್ನು ಅಧಿಕಾರಿ ಕೇಳದಿದ್ದರೆ ಈಶ್ವರಿಯಿಂಲೇ ಜಾತಿ ನಿಂದನೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದನು ಎಂದು ಪೂಣಚ್ಚ ದೂರಿದರು.

ಪಂಚಾಯಿತಿ ಸದಸ್ಯ ಕೆ.ಎಸ್. ಗೋಪಾಲಕೃಷ್ಣನ ವಿರುದ್ಧ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಮೂಲಕ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಕಾನೂನು ಪ್ರಕಾರ ದೂರು ನೀಡುವದಾಗಿ ಸ್ಥಳದಲ್ಲಿಯೇ ಇದ್ದ ಮಾಧ್ಯಮದವರಿಗೆ ಸ್ಮಿತಾ ಪ್ರಕಾಶ್ ತಿಳಿಸಿದರು. ಇದೇ ಸಮಯದಲ್ಲಿ ಪಂಚಾಯಿತಿ ಕಚೇರಿಗೆ ಬಂದ ಮಹಿಳಾ ಸದಸ್ಯರುಗಳಾದ ತನುಜಾ, ರುಕ್ಮಿಣಿ ಹಾಗೂ ನಿತಿನ್ ಪ್ರಕರಣವನ್ನು ಖಂಡಿಸುತ್ತೇವೆ. ಪಂಚಾಯಿತಿ ಸದಸ್ಯರೊಬ್ಬರು ದಲಿತ ವರ್ಗದ ಮಹಿಳೆಯ ಮೇಲೆ ದೌರ್ಜನ್ಯ ವಿರುದ್ಧ ಸಂಬಂಧಿಸಿದವರು ಕ್ರಮ ಕೈಗೊಳ್ಳಲೇಬೇಕೆಂದು ಸ್ಮಿತಾ ಪ್ರಕಾಶ್ ಅವರನ್ನು ಒತ್ತಾಯಿಸಿದರು.

ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಮಹಿಳಾ ದೌರ್ಜನ್ಯ, ಅಧಿಕಾರ ದುರುಪಯೋಗ, ಮಹಿಳೆಗೆ ಜೀವ ಭಯದ ಬೆದರಿಕೆಗೆ ಸಂಬಂಧಿಸಿದಂತೆ ವೀರಾಜಪೇಟೆ ವಲಯ ಡಿವೈಎಸ್ಪಿ ನಾಗಪ್ಪ, ಸರ್ಕಲ್ ಇನ್ಸ್‍ಪೆಕ್ಟರ್ ಶಾಂತಮಲ್ಲಪ್ಪ, ಪೊನ್ನಂಪೇಟೆ ಸಮಾಜ ಕಲ್ಯಾಣ ಅಧಿಕಾರಿ ಬೇಟಿ ನೀಡಿ ಪಂಚಾಯಿತಿಯ ಮೂರು ಮಂದಿ ಸದಸ್ಯರಿಂದ ಹೇಳಿಕೆಯನ್ನು ಪಡೆದರು. ಉಳಿದ 6ಮಂದಿ ಸದಸ್ಯರ ಹೇಳಿಕೆಯನ್ನು ನಂತರ ಪಡೆಯುವದಾಗಿ ಪೊಲೀಸರು ಪೂಣಚ್ಚ ಅವರಿಗೆ ತಿಳಿಸಿದರು.

ದಲಿತ ಹಾಗೂ ಮಹಿಳಾ ಅಧ್ಯಕ್ಷೆ ಈಶ್ವರಿಯ ಅಧಿಕಾರವನ್ನು ತಾನು ದುರುಪಯೋಗಗೊಳಿಸಿಕೊಂಡು ವೇತನ ಭತ್ಯೆ ಗುಳುಂ, ದೌರ್ಜನ್ಯ ನಡೆಸಿದ ಸದಸ್ಯ ಗೋಪಾಲಕೃಷ್ಣನನ್ನು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒಂಟಿಯಂಗಡಿಯ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಸಿ.ಮಹೇಂದ್ರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದರು.