ಮಡಿಕೇರಿ, ಡಿ. 16: ತಾ. 7 ರಂದು ಮಾಲ್ದಾರೆ ಸನಿಹದ ದಿಡ್ಡಳ್ಳಿ ದೇವಮಾಚಿ ಮೀಸಲಾತಿ ಅರಣ್ಯದಲ್ಲಿ ನೆಲೆಗೊಂಡಿದ್ದ 577 ಗಿರಿಜನ ಕುಟುಂಬಗಳ ಗುಡಿಸಲು ನಿರ್ನಾಮ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸುಮಾರು 1500 ಮಂದಿ ಗಿರಿಜನರು ಇದೀಗ ಬೇರೆ ಕಡೆ ಆಶ್ರಯ ಪಡೆದಿದ್ದು, ಈ ಮಂದಿಯ ಪುರ್ನವಸತಿ ಕಾರ್ಯ ಕಗ್ಗಂಟಾಗಿ ಪರಿಣಮಿಸುತ್ತಿದೆ. ಇಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಈ ಸಮಸ್ಯೆ ಅಷ್ಟೊಂದು ಗಂಭೀರವಾಗಿಲ್ಲ ವೆಂದು ಸರಾಗವಾಗಿ ಪರಿಹÀರಿಸುವ ರೀತಿಯಲ್ಲಿ ಮಾತನಾಡಿದರು. ಅರಣ್ಯ ಸಮಿತಿಯ ಸಭೆಯೊಂದನ್ನು ಕರೆದು ಈಗ ತೆರವುಗೊಳಿಸಿದ್ದ ಸ್ಥಳದಲ್ಲಿಯೇ ಬಡವಾಣೆಗಳನ್ನು ನಿರ್ಮಾಣಗೊಳಿಸಿ ಗಿರಿಜನರಿಗೆ ಪುರ್ನವಸತಿ ಕಲ್ಪಿಸಬಹುದಾದ ಅವಕಾಶ ಇದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಮಿತಿ ಮೂಲಕ ಜಿಲ್ಲೆಯ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಶಿಫಾರಸು ಮಾಡಿ ಮಂಜೂರು ಪಡೆಯಬಹು ದಾಗಿದೆ ಎಂದು ಸುಲಭ ಸಾಧ್ಯವಾಗಿ ಮಾತನಾಡಿದರು. ಆದರೆ ಸಚಿವರು ತೆರಳಿದ ಬಳಿಕ ಜಿಲ್ಲಾಧಿಕಾರಿ ಆರ್.ವಿ. ಡಿಸೋಜಾ ಅವರು, ಪತ್ರಿಕಾಗೋಷ್ಠಿ ನಡೆಸಿ ಗಿರಿಜನರನ್ನು ತೆರವುಗೊಳಿಸಿದ ಜಾಗ ಮೀಸಲು ಪ್ರದೇಶವಾಗಿದೆ. ಅಲ್ಲಿ ಪುರ್ನವಸತಿ ಅಸಾಧ್ಯವಾದ ಕಾರ್ಯ. ಜಿಲ್ಲೆಯ ಅನೇಕ ಕಡೆ ಬದಲಿ ಜಾಗವನ್ನು ಈಗಾಗಲೇ ಗುರುತಿಸುವ ಕಾರ್ಯ ನಡೆದಿದ್ದು, ಈ ಸ್ಥಳಗಳಿಗೆ ಗಿರಿಜನರನ್ನು ಸ್ಥಳಾಂತರಿಸಬಹುದು ಎಂದು ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದರು. ಈ ನಡುವೆ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ ಹಾಗೂ ವಲಯಾಧಿಕಾರಿ ಗೋಪಾಲ್ ಇವರು ಗಳನ್ನು ‘ಶಕ್ತಿ’ ಸಂಪರ್ಕಿಸಿದಾಗ ಒಕ್ಕಲೆಬ್ಬಿಸಿದ ಸ್ಥಳ ಮೀಸಲು ಅರಣ್ಯ ಎಂಬದು ಸ್ಪಷ್ಟವಾಗಿದೆ.
(ಮೊದಲ ಪುಟದಿಂದ) ಕಳೆದ ಜೂನ್ 20 ರಿಂದ ಈ ಸ್ಥಳದಲ್ಲಿ ಕೆಲವು ಮಧ್ಯವರ್ತಿಗಳ ನೆರವಿನಿಂದ ಗಿರಿಜನರು ಗುಡಿಸಲುಗಳನ್ನು ನಿರ್ಮಿಸಲು ಪ್ರಾರಂಭಿಸಿದರು. ಪ್ರಾರಂಭದ ಹಂತದಲ್ಲಿಯೇ ಈ ಗುಡಿಸಲುಗಳನ್ನು ತೆರವುಗೊಳಿಸÀಲು ಕಾರ್ಯಾಚರಣೆಗೆ ಜಿಲ್ಲಾ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಕಾರ ಕೋರಲಾಗಿತ್ತು. ಜಿಲ್ಲೆಯಲ್ಲಿ ಕೆಲವೊಂದು ಗಂಭೀರ ಘಟನೆಗಳಿಂದಾಗಿ ಜಿಲ್ಲಾಡಳಿತದಿಂದ ಈ ಕಾರ್ಯಕ್ಕೆ ತಕ್ಷಣ ಸ್ಪಂದನ ಸಿಕ್ಕಿರಲಿಲ್ಲ. ಈ ನಡುವೆ ಮೀಸಲು ಅರಣ್ಯದಲ್ಲಿ ಪ್ರತಿ ದಿನವೂ ಗುಡಿಸಲುಗಳ ಸಂಖ್ಯೆ ಜಾಸ್ತಿಯಾಗುತ್ತ ಬಂದು 500 ಮೀರಿತ್ತು. ಕೊನೆಗೂ ಅರಣ್ಯ ಇಲಾಖೆಗೆ ಡಿ. 7 ರಂದು ತೆರವುಗೊಳಿಸಲು ಜಿಲ್ಲಾಡಳಿತದಿಂದ ಸಹಕಾರ ದೊರೆತು ಕಾರ್ಯಾಚರಣೆ ಮಾಡಲಾಯಿತು ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ಅಮ್ಮತ್ತಿ, ಕುಶಾಲನಗರ, ಬಿ.ಶೆಟ್ಟಿಗೇರಿ, ಕುಂದ ಮೊದಲಾದ ಕಡೆ ಈಗಾಗಲೇ ಬದಲಿ ಜಾಗಕ್ಕೆ ಕಂದಾಯ ಇಲಾಖೆಯಿಂದ ಸ್ಥಳ ಗುರುತಿಸ ಲಾಗಿದ್ದು, ಯಾವದೇ ಸಂದರ್ಭ ಗಿರಿಜನ ವರ್ಗದ ಮಂದಿ ಸಹಕರಿಸಿ ದರೆ, ಅವರಿಗೆ ತಕ್ಷಣವೇ ಪುರ್ನವಸತಿ ಕಲ್ಪಿಸಲಾಗುವದೆಂದು ಭರವಸೆ ಯಿತ್ತರು. ಈ ಹಿಂದೆ 1978 ಮತ್ತು 2005ರೊಳಗೆ ಅರಣ್ಯ ಇಲಾಖಾ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಿದ್ದ ಗಿರಿಜನರಿಗೆ ಕಾನೂನಾತ್ಮಕ ವಾಗಿ ಆ ಮನೆಗಳನ್ನು ಖಾಯಂಮಾತಿ ಮಾಡಿಕೊಡಲಾಗಿದೆ. ಆದರೆ, ದೇವಮಾಚಿ ಮೀಸಲು ಪ್ರದೇಶಗಳಲ್ಲಿ ಕಳೆದ 6 ತಿಂಗಳ ಹಿಂದೆಯಷ್ಟೇ ಗುಡಿಸಲುಗಳನ್ನು ನಿರ್ಮಿಸಿದ್ದು, ಕಾನೂನಾತ್ಮಕವಾಗಿ ಈ ಮನೆಗಳನ್ನು ಮಂಜೂರು ಮಾಡಲು ಅಸಾಧ್ಯ ಎಂದು ಈ ಅಧಿಕಾರಿಗಳು ಸಮಜಾಯಿಷಿಕೆ ನೀಡಿದರು.
ಬೆತ್ತಲೆ ಪ್ರತಿಭಟನೆಗೆ ಸಿದ್ಧ
ಈ ನಡುವೆ ಒಕ್ಕಲೆಬ್ಬಿಸಲ್ಪ ಪಟ್ಟಿರುವ ಗಿರಿಜನ ಮಂದಿ ದೇವಮಾಚಿ ಅರಣ್ಯ ಪ್ರದೇಶದ ಒತ್ತಿನಲ್ಲೇ ಇರುವ ಆಶ್ರಮ ಶಾಲೆಯಲ್ಲಿರುವ ಖಾಲಿ ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಮಕ್ಕಳು, ಮಹಿಳೆಯರು ಎನ್ನದೇ ಬಯಲು ಪ್ರದೇಶದಲ್ಲಿ ನೆಲೆ ನಿಂತಿರುವ ಈ ಅಮಾಯಕ ಮಂದಿಯನ್ನು ಗಮನಿಸಿದಾಗ ಸಹಜವಾಗಿ ಅನುಕಂಪದ ಸೆಲೆ ಮೂಡುತ್ತದೆ.
‘ಶಕ್ತಿ’ ಪ್ರತಿನಿಧಿ ಇಂದು ಸ್ಥಳಕ್ಕೆ ತೆರಳಿದಾಗ ದುಃಖ ದುಮ್ಮಾನ ಉಕ್ಕಿ ಬಂದ ಆವೇಶದಲ್ಲಿ ಗಿರಿಜನ ಮಹಿಳಾ ನಾಯಕಿ ಜೆ.ಕೆ. ಮುತ್ತಮ್ಮ ಅವರು ಇದೇ ರೀತಿ ಶೋಷಣೆ ಮುಂದುವರೆ ದರೆ, ರಾಜ್ಯಮಟ್ಟದಲ್ಲಿಯೇ ಪ್ರತಿಭಟನೆಗೆ ತೆರಳಿ ಬೆತ್ತಲೆಯಾಗಿ ತಮ್ಮ ಅಳಲನ್ನು ತೋಡಿಕೊಳ್ಳುವಂತಹ ಸನ್ನಿವೇಶ ಅನಿವಾರ್ಯವಾಗಬಹುದು. ಇದಕ್ಕೂ ತಯಾರಿದ್ದೇವೆ ಎಂದು ಘಂಟಾ ಘೋಷವಾಗಿ ನುಡಿದರು. ಇದಕ್ಕೆ ಪುಷ್ಟಿ ನೀಡಿ ಮಾತನಾಡಿದ ಜೆ.ಕೆ. ಸಾಮಿ ಅವರು ಪುರುಷರು ಕೂಡ ನಗ್ನ ಪ್ರತಿಭಟನೆಗೆ ಸನ್ನದ್ಧರಾಗಿದ್ದಾರೆಂದು ಆವೇಶದಿಂದ ನುಡಿದರು. ಗಿರಿಜನ ಮುಖಂಡ ಅಪ್ಪಾಜಿ ಮಾತನಾಡಿದರು.
ಈ ನಡುವೆ ಚಿತ್ರನಟ ಚೇತನ್ ಗಿರಿಜನ ಮಂದಿಯ ಈ ಹೋರಾಟಕ್ಕೆ ಕೈ ಜೋಡಿಸಿದ್ದು, ಉದ್ದೇಶ ಈಡೇರುವರೆಗೂ ತಾನು ಇವರೊಂದಿಗೆ ಹೋರಾಟ ಕಣದಲ್ಲಿ ಇರುವದಾಗಿ ಆಶ್ವಾಸನೆಯಿತ್ತರು. ಶೇ. 25 ರಷ್ಟು ಮಂದಿ ದಲಿತರು, ಆದಿವಾಸಿಗಳು ಕರ್ನಾಟಕದಲ್ಲಿದ್ದು, ಸರ್ಕಾರ ದಬ್ಬಾಳಿಕೆಯಿಂದ ಪ್ರಜಾಪ್ರಭುತ್ವದಲ್ಲಿ ಶೋಷಣೆಗೈಯುತ್ತಿದ್ದಾರೆ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ರೈತ ಸಂಘದ ಕಂದಗಲ್ ಶ್ರೀನಿವಾಸ್ ಹಾಗೂ ಜೋಗನಹಳ್ಳಿ ಗುರುಮೂರ್ತಿ ಇವರುಗಳು ಅರಣ್ಯದಲ್ಲಿ ವಾಸಿಸುವ ಗಿರಿಜನರು ಇದುವರೆಗೂ ಅರಣ್ಯ, ನೆಲ, ಜಲವನ್ನು ಉಳಿಸಿಕೊಂಡು ಬಂದಿದ್ದಾರೆ. ಇವರನ್ನು ಕ್ರೂರ ರೀತಿಯಲ್ಲಿ ಒಕ್ಕಲೆಬ್ಬಿಸುವ ಕ್ರಮ ಖಂಡನೀಯ ಎಂದರು. ಡಾ. ಕೃಷ್ಣಮೂರ್ತಿ ಚಮಾನಮ್ ಅವರು ಮಾತನಾಡಿ, ಕಾಡಿನ ನಿವಾಸಿಗಳಾದ ಗಿರಿಜನರಿಗೆ ಪ್ರಾಣಿಗಳು ಮಿತ್ರರಂತಿದ್ದರೆ, ಮನುಷ್ಯ ಎಂಬ ಕ್ರೂರ ಪ್ರಾಣಿಗಳಿಂದಲೇ ರಕ್ಷಣೆ ಇಲ್ಲದಂತಾಗಿದೆ ಎಂದು ವಿಷಾದಿಸಿದರು.
ರಾಜ್ಯ ಭೂಮಿ ಮತ್ತು ನಿವೇಶನ ಹೋರಾಟ ಸಮಿತಿ ಈ ಗಿರಿಜನ ಮಂದಿಗೆ ಅದೇ ಸ್ಥಳದಲ್ಲಿ ಪುರ್ನವಸತಿ ಆಗುವವರೆಗೂ ನಿರಂತರ ಕೈ ಜೋಡಿಸುತ್ತದೆ. ಇದರ ನೇತೃತ್ವವನ್ನು ರಾಜ್ಯಮಟ್ಟದ ನಾಯಕರಾದ ದೊರೆಸ್ವಾಮಿ ಅವರು ವಹಿಸಲಿದ್ದಾರೆ ಎಂದು ಕೇಂದ್ರ ಸಮಿತಿಯ ಸಿರಿಮನೆ ನಾಗರಾಜು ತಿಳಿಸಿದರು. ಸಮಿತಿಯ ಜಿಲ್ಲಾ ಪ್ರತಿನಿಧಿ ಡಿ.ಎಸ್. ನಿರ್ವಾಣಪ್ಪ್ಪ ಜನಾಂದೋಲನ ಸಮಿತಿಯ ಮಹಿಳಾ ನಾಯರಾದ ನೇಮಿಚಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ಗುರಿ ಮುಟ್ಟುವವರೆಗೂ ಹೋರಾಟಕ್ಕೆ ಶತಃಸಿದ್ಧ ಎಂದು ಘೋಷಿಸಿದರು.
ಬೇರೆ ಯಾವದೇ ಸ್ಥಳದಲ್ಲಿ ಪುರ್ನವಸತಿ ಕಲ್ಪಿಸಿದರೆ, ಭೂಮಿ ಹಕ್ಕು ಹೋರಾಟ ಸಮಿತಿ ಇದಕ್ಕೆ ಸಮ್ಮತಿ ನೀಡುವದಿಲ್ಲ. ಈ ಹಿಂದಿನ ಪ್ರದೇಶದಲ್ಲಿ ಕಲ್ಪಿಸಿದರೆ ಮಾತ್ರ ಹೋರಾಟ ಸ್ಥಗಿತಗೊಳ್ಳುತ್ತದೆ ಎಂದು ಎಲ್ಲಾ ಹೋರಾಟಗಾರರು ಅಭಿಪ್ರಾಯಪಟ್ಟರು.
ಈ ನಡುವೆ ಈ ಹೊಸ ಸ್ಥಳದಲ್ಲಿ ಬೀಡುಬಿಟ್ಟಿರುವ ಮಹಿಳೆಯರು ಮಕ್ಕಳಾದಿಯಾಗಿ ನೂರಾರು ಮಂದಿ ಗಿರಿಜನರಿಗೆ ಕೆಲವು ದಾನಿಗಳು ಬಂದು ಅನ್ನ, ಆಹಾರ ಕಲ್ಪಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುತ್ತಿರುವ ಆಶ್ರಮ ಶಾಲೆಯ ಮೂಲಕವೂ ಸಹಕಾರ ದೊರೆಕುತ್ತಿದೆ. ಈ ಆಶ್ರಮದ ಸಿಬ್ಬಂದಿ ಸಹಕರಿಸುತ್ತಿರುವದಕ್ಕೆ ಕೆಲವು ಐಟಿಡಿಪಿ ಅಧಿಕಾರಿಗಳು ಬಂದು ಇಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಖಂಡನೆ ವ್ಯಕ್ತಪಡಿಸಿದ ಜಿ.ಪಂ. ಸದಸ್ಯ ವಿಜು ಸುಬ್ರಮಣಿ ಅವರು, ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯಿತ್ತಿದ್ದಾರೆ.ಅಮಾಯಕ ಮಂದಿಗೆ ನೀರು ಆಹಾರ ಕಲ್ಪಿಸುವದಕ್ಕೆ ತಡೆ ಮಾಡಿದರೆ, ಅದರ ತೀವ್ರ ಪರಿಣಾಮವನ್ನು ಸಂಬಂಧಿಸಿದವರು ಎದುರಿಸಬೇಕಾ ಗುತ್ತದೆ ಎಂದು ಮುನ್ನಚ್ಚರಿಕೆ ಯಿತ್ತಿದ್ದಾರೆ.
ಪರಿಹಾರವೇನು?
ಕಾನೂನು ಪ್ರಕಾರ ಈ ಸ್ಥಳದಲ್ಲಿ ಮನೆ ಪುನರ್ ನಿರ್ಮಾಣ ಅಸಾಧ್ಯ ಎಂಬ ಅಧಿಕಾರಿಗಳ ಪಟ್ಟು, ‘ಅಡ್ಡಗೋಡೆ ಮೇಲೆ ದೀಪವಿಟ್ಟಂತೆ’ ಕಂದಾಯ ಸಚಿವರು ತೇಲಿಸಿ ಮಾತನಾಡಿ ಜಾರಿಕೊಂಡು ಹೋಗಿರುವ ವಿನೂತನ ಶೈಲಿ, ಛಲ ಬಿಡೆವು. ಗುರಿ ಸಾಧಿಸುವೆವು ಎನ್ನುವ ಸಂಘಟನೆಗಳ ಬೆಂಬಲದೊಂದಿಗಿನ ಗಿರಿಜನರ ನಿಲುವು ಪರಿಗಣಿಸಿದಾಗ- ಅಂತಿಮವಾಗಿ ಫಲಿತಾಂಶ ಏನು ಎಂಬದು ಈಗಂತೂ ಕಗ್ಗಂಟಾಗಿಯೇ ಉಳಿದಿರುವ ವಿದ್ಯಮಾನ ಎನ್ನುವದು ನೈಜ ವಿಚಾರವಾಗಿದೆ.