ಮಡಿಕೇರಿ, ಸೆ. 24: ಕೊಡಗು ಜಿಲ್ಲೆಯಲ್ಲಿನ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಲು ಮುಂದಾಗುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ಆಗಮಿಸಿದ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಮನವಿ ಸಲ್ಲಿಸಿ ಆಗ್ರಹಿಸಿದರು.

ಸರಕಾರ ಖಾಲಿ ಜಾಗಕ್ಕೆ, ಕೃಷಿ ಜಾಗಕ್ಕೆ, ನೀರಾವತಿ ಜಾಗಕ್ಕೆ ಕಂದಾಯ ನಿಗದಿ ಮಾಡಿರುವಂತೆ ಬಾಣೆ ಜಾಗಕ್ಕೂ ಕಂದಾಯ ನಿಗದಿ ಮಾಡಬೇಕಾಗಿದೆ. ಜಿಲ್ಲಾ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಕಡತಗಳು ವಿಲೇವಾರಿಯಾಗದೆ ಸ್ಥಗಿತಗೊಂಡಿದ್ದು, ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಕಂದಾಯ ಇಲಾಖೆಗೆ ಒಳಪಟ್ಟ ಭೂಮಿಯನ್ನು ಲ್ಯಾಂಡ್ ಬ್ಯಾಂಕ್ ಆಧಾರದಲ್ಲಿ ಅರಣ್ಯ ಇಲಾಖೆಗೆ ಸಾವಿರಾರು ಎಕರೆ ಭೂಮಿಯನ್ನು ನೀಡಿದೆ. ಭೂಮಿ ನೀಡುವಾಗ ಸರ್ವೆ ಕಾರ್ಯ ನಡೆಯಲಿಲ್ಲ. ಕಂದಾಯ ಇಲಾಖೆಯ ಭೂಮಿಯ ಸರ್ವೆ ನಂಬರಿನ ಆಧಾರದಲ್ಲಿ ವರ್ಗಾವಣೆಯಾಗಿದೆ. ಹಾಗಾಗಿ ಅರಣ್ಯ ಇಲಾಖೆ ಈಗ ಆ ಭೂಮಿ ತನ್ನದೆಂದು ವಾದಿಸುತ್ತಿರುವದರಿಂದ ಅಲ್ಲಿ 40 ವರ್ಷಗಳಿಂದಲೂ ಅಧಿಕ ಕಾಲದಿಂದ ಮನೆ ಕಟ್ಟಿ ಅಲ್ಪಸ್ವಲ್ಪ ಕೃಷಿ ಮಾಡಿಕೊಂಡು ಬದುಕುತ್ತಿರುವವರಿಗೆ ಅನ್ಯಾಯವಾಗಿದೆ. ಸರಕಾರ ಈ ಕುರಿತು ಕಾನೂನಿಗೆ ತಿದ್ದುಪಡಿ ತಂದು ಬಡವರಿಗೆ ನ್ಯಾಯ ದೊರಕಿಸಬೇಕು.

ಅಕ್ರಮ-ಸಕ್ರಮ ಸಮಿತಿಯಲ್ಲಿ ಭೂ ಮಂಜೂರಾತಿ ಸಂದರ್ಭ ಸಾಕಷ್ಟು ಅವ್ಯವಹಾರಗಳು ಆಗಿರುವದಾಗಿ ಸಾರ್ವಜನಿಕರು ನೀಡಿದ ಪುಕಾರಿನ ಮೇಲೆ ಭೂ ಮಂಜೂರಾತಿಗೊಂಡ ಅನೇಕರಲ್ಲಿ ತೀರಾ ಬಡ-ಬಗ್ಗರು ಸೇರಿಕೊಂಡಿದ್ದಾರೆ. ಮಂಜೂರಾತಿಯನ್ನು ರದ್ದು ಮಾಡುತ್ತಿರುವದು ನ್ಯಾಯ ಸಮ್ಮತವಲ್ಲ. ಈ ಕುರಿತು ಕಂದಾಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸೂಕ್ತ ನ್ಯಾಯ ಸೂಚಿಸಬೇಕು. 5 ಎಕರೆಗೆ ಒಳಪಟ್ಟಂತೆ ಸರಕಾರಿ ಜಾಗವನ್ನು ಅತಿಕ್ರಮಿಸಿ ಕೃಷಿ ಮಾಡಿಕೊಂಡು ಬದುಕುತ್ತಿರುವವರಿಗೆ ಆ ಭೂಮಿಯನ್ನು ಮಂಜೂರಾತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗ್ರಾಮ ನಕಾಶೆಗಳನ್ನು ಸರಿಪಡಿಸಲು ಕ್ರಮ ಅಗತ್ಯ.

ಸರಕಾರದ ವತಿಯಿಂದ ಕೃಷಿಕರಿಗೆ ಮಂಜೂರಾದ ಹಾಗೂ ಅಕ್ರಮ-ಸಕ್ರಮದಡಿಯಲ್ಲಿ ಸಕ್ರಮಗೊಳಿಸಿದ ಜಮೀನನ್ನು ಕಂದಾಯ ಇಲಾಖೆಯಿಂದ ಪೋಡಿ ಮತ್ತು ದುರಸ್ತಿಪಡಿಸುವ ಕೆಲಸ ಶಾಸಕರುಗಳ ಅಧ್ಯಕ್ಷತೆಯಲ್ಲಿರುವ ಅಕ್ರಮ-ಸಕ್ರಮ ಸಮಿತಿ ಸಭೆ ನಡೆಯಲು ಕ್ರಮ, ಕೊಡಗು ಜಿಲ್ಲೆಯಲ್ಲಿ 1961 ರ ಭೂ ಸುಧಾರಣೆ ಕಾಯಿದೆಯಡಿಯಲ್ಲಿ ಸರಕಾರದ ಅಧೀನಕ್ಕೆ ಬರಬೇಕಾದ ಜಮೀನನ್ನು ಸೆಕ್ಷನ್ 77 ರಡಿಯಲ್ಲಿ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ, ಮಾಜಿ ಸೈನಿಕರು, ಭೂ ರಹಿತರಿಗೆ ಹಂಚಬೇಕಾಗಿದ್ದರೂ ಕಳೆದ ಹಲವಾರು ವರ್ಷದಿಂದ ಯಾವದೇ ಜಮೀನು ಹಂಚಿಲ್ಲ. ಈ ಕುರಿತು ಕ್ರಮ ಜರುಗಿಸಬೇಕಾಗಿದೆ.

ಭೂ ಪರಿವರ್ತನೆಗೆ ಸಂಬಂಧಪಟ್ಟಂತೆ ಕೊಡಗು ಜಿಲ್ಲಾಡಳಿತ ಅವಶ್ಯವಿಲ್ಲದ ಹಲವಾರು ದೃಢೀಕರಣವನ್ನು ನೀಡುವಂತೆ ಒತ್ತಾಯಿಸಿದ್ದು, ಉದಾಹರಣೆಗೆ ಗೇಣಿದಾರರಲ್ಲವೆಂಬ ದೃಢೀಕರಣ, ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ ಜಮೀನು ಪರಭಾರೆ ನಿಷೇಧ ಕಾಯಿದೆ ಇತ್ಯಾದಿಗಳ ಬಗ್ಗೆ ಹಾಗೆಯೇ ಫಾರ್ಮ್‍ಹೌಸ್ (ತೋಟದ ಮನೆ) ನಿರ್ಮಿಸಲು 1964 ಭೂ ಕಂದಾಯ ಕಾಯಿದೆ ಸೆಕ್ಷನ್ 95 ರಡಿಯಲ್ಲಿ ವಿನಾಯಿತಿ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಭೂ ಪರಿವರ್ತನೆ ಆಗಲೇಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ನಿರ್ದೇಶನ, ಕೃಷಿ ಜಮೀನು, ಭತ್ತದ ಗದ್ದೆಗಳನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದನ್ನು ತಡೆಯದಿದ್ದರೆ ಮುಂದೆ ಕಾವೇರಿ ನದಿ ಬತ್ತಿಹೋಗುವ ಸಂಭವ ಇದೆ. ಆದುದರಿಂದ ಭತ್ತದ ಗದ್ದೆಗಳನ್ನು ಹಾಗೂ ಜಲಮೂಲಗಳನ್ನು ರಕ್ಷಿಸಲು ಕೇರಳ ರಾಜ್ಯದಲ್ಲಿರುವಂತೆ ಕರ್ನಾಟಕ ರಾಜ್ಯದಲ್ಲೂ ಕಠಿಣವಾದ ಕಾಯಿದೆ ಅಗತ್ಯ.

ಮಡಿಕೇರಿ ನಗರದಲ್ಲಿರುವ ನಿವೇಶನಗಳ ವಿಸ್ತೀರ್ಣ ಕರಾರುವಕ್ಕಾಗಿಲ್ಲ. ಸಿಟಿಯ ಸರ್ವೆ ಬಗ್ಗೆ 1964 ರ ಭೂ ಕಂದಾಯ ಕಾಯಿದೆಯ ಸೆಕ್ಷನ್ 106, 112 ರಡಿ ಸೂಕ್ತ ಆದೇಶ ಅಗತ್ಯ.

ನಗರ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ಅಲ್ಪಸಂಖ್ಯಾತರು, ದೀನ ದಲಿತರು, ಹಿಂದುಳಿದವರು ವಾಸಿಸಲು ಮನೆಯಿಲ್ಲದ ಕಾರಣ ಸರಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಆಯಾ ಪ್ರಾಧಿಕಾರಗಳಿಗೆ ಕಟ್ಟಿಕೊಂಡು ಬಂದಿರುತ್ತಾರೆ. ಇದನ್ನು ಮನಗಂಡು ಸರಕಾರ ಗ್ರಾಮಾಂತರ ಪ್ರದೇಶದಲ್ಲಿ 94 ಸಿ ಅಡಿ ಕನಿಷ್ಟ 15 ಸೆಂಟ್ ಜಾಗವನ್ನು ನಗರ ಪ್ರದೇಶ ವ್ಯಾಪ್ತಿಯಲ್ಲಿ 94 ಸಿ ಅಡಿ ಕನಿಷ್ಟ 5.50 ಸೆಂಟ್ ಜಾಗವನ್ನು ಸಕ್ರಮ ಮಾಡಿ ಪಟ್ಟೆ ವಿತರಿಸುವ ಕಾರ್ಯವನ್ನು ನಮ್ಮ ಸರಕಾರ ಈ ಹಿಂದೆ ಕೈಗೊಂಡಿತ್ತು. ಆದರೆ ಇದೀಗ ಸರಕಾರದ ಹೊಸ ಸುತ್ತೋಲೆಯ ಪ್ರಕಾರ ನಗರ ವ್ಯಾಪ್ತಿಯಲ್ಲಿ 94 ಸಿ ಅಡಿ 1.75 ಸೆಂಟ್ ಜಾಗವನ್ನು ಮಾತ್ರ ಸಕ್ರಮ ಮಾಡಿ ಪಟ್ಟೆ ವಿತರಿಸುವ ಕಾರ್ಯ ಕೈಗೊಂಡಿದೆ. ಆದುದರಿಂದ ನಗರ ವ್ಯಾಪ್ತಿಯಲ್ಲಿ ಇರುವವರಿಗೆ ಹಿಂದಿನಂತೆ 5.50 ಸೆಂಟ್ ನಿವೇಶನಕ್ಕೆ ಹಕ್ಕುಪತ್ರ ನೀಡುವಂತೆ, ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸೂಕ್ತ ಕಾನೂನು ತಿದ್ದುಪಡಿ ತಂದು ಅಧಿಕಾರಿಗಳಿಗೆ ಆದೇಶಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.