ಗೋಣಿಕೊಪ್ಪಲು,ಜ.26: ದೇಶಾದ್ಯಂತ ಔಷಧಿ ಮಾಫಿಯಾ ದಂಧೆ ಹೆಚ್ಚುತ್ತಿದ್ದು, ದಿನನಿತ್ಯ ರೋಗಿಗಳು ಕಲಬೆರಕೆ ಮಾತ್ರೆ, ಔಷಧಿಯನ್ನೇ ಸೇವಿಸಬೇಕಾದ ಅನಿವಾರ್ಯತೆಯಿಂದಾಗಿ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಆರೋಗ್ಯದ ಬಗ್ಗೆ ತಾತ್ಸಾರ, ಅಂಧ ಆತ್ಮವಿಶ್ವಾಸ ದಿಂದಾಗಿ ಹಲವು ರೋಗಗಳನ್ನು ಬಳುವಳಿಯಾಗಿ ಪಡೆದು ಕೊಳ್ಳುತ್ತಿದ್ದೇವೆ. ಕೀಟ ನಾಶಕ ಸಿಂಪಡಣೆ ಮಾಡಿರುವ ಹಣ್ಣು ಹಂಪಲುಗಳು, ಆಹಾರ ಪದಾರ್ಥಗಳ ಸೇವನೆಯಿಂದಾಗಿಯೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಕಾಳಜಿ ಬಗ್ಗೆ ಅರಿವು ಅಗತ್ಯ. ಪುರಾತನ ಅಯುರ್ವೇದ ವೈದ್ಯ ಪದ್ಧತಿಯನ್ನು ನಾವೆಲ್ಲರೂ ಗೌರವಿಸುವಂತಾಗಬೇಕು ಎಂದು ‘ಶಕ್ತಿ’ ದೈನಿಕದ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಅಭಿಪ್ರಾಯಪಟ್ಟರು.

ಬೆಂಗಳೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ, ಬೆಂಗಳೂರು ಶ್ರೀ ಶ್ರೀ ಅಯುರ್ವೇದ ವೈದ್ಯಕೀಯ ಕಾಲೇಜು, ಗೋಣಿಕೊಪ್ಪಲು ಪ್ರೌಢಶಾಲೆ, ಜನನಿ ಪೆÇಮ್ಮಕ್ಕಡ ಕೂಟ ಗೋಣಿಕೊಪ್ಪಲು, ಗೋಣಿಕೊಪ್ಪಲು ಪ್ರೆಸ್ ಕ್ಲಬ್, ಗೋಣಿಕೊಪ್ಪಲು ಸುದ್ದಿ ಸಂಸ್ಥೆ ಹಾಗೂ ವಿವಿಧ ಸಂಘ - ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಪ್ರೌಢಶಾಲಾ ಆವರಣದಲ್ಲಿ ಉಚಿತ ಆಯುರ್ವೇದ ದಂತ, ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ.ಪ್ರದೀಪ್ ಅವರ ಅಕಾಲಿಕ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಅವರು, ಜಿಲ್ಲೆ ಕಂಡ ಉತ್ತಮ ವ್ಯಕ್ತಿಗಳಲ್ಲಿ ಪ್ರದೀಪ್ ಕೂಟ ಒಬ್ಬರಾಗಿದ್ದರು. ಮನುಷ್ಯ ಆರೋಗ್ಯವಂತನಂತೆ ಕಾಣುತ್ತಿರು ವಾಗಲೇ ಅನಾರೋಗ್ಯದಿಂದ ಸಾವನ್ನಪ್ಪಿರುವದು ಆಘಾತಕಾರಿ ಎಂದರು.ಈ ನಿಟ್ಟಿನಲ್ಲಿ ಪ್ರತಿಯೋರ್ವ ವ್ಯಕ್ತಿಯೂ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಎಚ್ಚರವಹಿಸುವದು ಅನಿವಾರ್ಯವಾಗಿದೆ.

ಆಯುರ್ವೇದಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ಇದೀಗ ಮತ್ತೆ ಜನರಲ್ಲಿ ಹಳೇ ಪದ್ಧತಿ ಬಗ್ಗೆ ಜಾಗೃತಿ ಮೂಡುತ್ತಿದೆ. ವಿದೇಶಿಗರು ಭಾರತದ ಆಯುರ್ವೇದ ಪದ್ಧತಿಯನ್ನು ಅವಲಂಬಿಸುತ್ತಿದ್ದು, ನಾವು ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಕಡೆಗಣಿಸು ತ್ತಿರುವದು ಇಂದಿನ ರೋಗಗ್ರಸ್ತ ಸಮಾಜ ನಿರ್ಮಾಣಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭ ಶಲ್ಯತಂತ್ರ ತಜ್ಞ ಡಾ.ವಿವೇಕ್ ಅವರು ಕಳತ್ಮಾಡುವಿನ ನಂಜುಂಡಕುಮಾರ್ ಅವರ ಹಲ್ಲನ್ನು ಜಾಲಂಧರ ಬಂಧದ ಮೂಲಕ ಅರವಳಿಕೆ ಇಲ್ಲದೆ ಕೀಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕೊಡಗು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಆಯುರ್ವೇದ ದಂತ ತಪಾಸಣಾ ಶಿಬಿರ ನಡೆದಿದ್ದು, ಸುಮಾರು 12 ವರ್ಷ ಸೇವೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿಯ ದಂತವನ್ನು ಅರವಳಿಕೆ ನೀಡದೆ, ನೋವಿಲ್ಲದೆ ಕಿತ್ತಿರುವದಾಗಿ ವಿವೇಕ್ ಮಾಹಿತಿ ನೀಡಿದರು.

ಜಿ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು ಗುಣಮಟ್ಟದ ಆಹಾರ ಸೇವನೆ ಅಗತ್ಯ. ಇದೀಗ ಆರೋಗ್ಯ ಪುನಶ್ಚೇತನಕ್ಕೆ ಜನತೆ ಪ್ರಾಚೀನ ಪದ್ಧತಿಯತ್ತ ಮುಖ ಮಾಡುತ್ತಿರುವದು ಉತ್ತಮ ಬೆಳವಣಿಗೆ. ಜಿ.ಪಂ.ಮಟ್ಟದಲ್ಲಿಯೂ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಆಯುರ್ವೇದ ದಂತ ತಪಾಸಣಾ ಹಾಗೂ ಚಿಕಿತ್ಸಾ ವಿಧಾನವನ್ನು ವಿವಿಧ ಗ್ರಾಮೀಣ ಭಾಗದಲ್ಲಿ ಆಯೋಜಿಸಲು ಪ್ರಯತ್ನಿಸ ಲಾಗುವದು ಎಂದು ಹೇಳಿದರು.

ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಅವರು ಮಾತನಾಡಿ, ಆಯುರ್ವೇದಕ್ಕೆ 5 ಸಾವಿರ ವರ್ಷಗಳಿಗೂ ಅಧಿಕ ಇತಿಹಾಸವಿದ್ದು, ವಿದೇಶದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ನಮ್ಮ ದೇಶದಲ್ಲಿ ಆಯುರ್ವೇದ ಪದ್ಧತಿ ಬಗ್ಗೆ ಜಿಗುಪ್ಸೆ, ತಾತ್ಸಾರ ಹೆಚ್ಚಿದೆ ಎಂದು ಹೇಳಿದರಲ್ಲದೆ, ಕೊಡಗಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಅಗತ್ಯ ಸ್ಥಾಪನೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕನಿಷ್ಟ 10 ಎಕರೆ ಜಾಗ ಕಾದಿರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ ಅವರು ಮಾತನಾಡಿ, ಅಲೋಪತಿ ನೋವು ನಿವಾರಕ ಔಷಧಿಯಿಂದ ಅಡ್ದಪರಿಣಾಮ ಅಧಿಕ. ಈ ನಿಟ್ಟಿನಲ್ಲಿ ಆಯುರ್ವೇದ ಔಷಧಿ ಬಳಕೆ ಅಧಿಕವಾಗಬೇಕು. ಕೊಡಗು ಜಿಲ್ಲೆಯಲ್ಲಿಯೂ ಅರವಳಿಕೆ ಇಲ್ಲದೆ ಹಲ್ಲು ಕೀಳುವ ಕೇಂದ್ರಗಳು ಸ್ಥಾಪನೆಯಾಗಬೇಕು ಎಂದು ಹೇಳಿದರು.

ಜನನಿ ಪೆÇಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಮಾತನಾಡಿ, ಅಡ್ಡ ಪರಿಣಾಮ ಇಲ್ಲದ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಗುಣಮುಖರಾಗುವದು ತಡವಾದರೂ ಇದು ಆರೋಗ್ಯಕ್ಕೆ ಉತ್ತಮ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಟ್ರಪಂಡ ಚಿಣ್ಣಪ್ಪ ಅವರು ಎಲ್ಲರಿಗೂ ಆರೋಗ್ಯ ಕಾಳಜಿ ಹೆಚ್ಚಬೇಕು. ನಿರ್ಲಕ್ಷ್ಯ ಕೂಡದು ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕುಪ್ಪಂಡ ಗಣೇಶ್ ತಿಮ್ಮಯ್ಯ, ಪ್ರೌಢಶಾಲಾ ಮುಖ್ಯೋ ಪಾಧ್ಯಾಯ ರತೀಶ್ ರೈ, ಶಾಲಾ ಮುಖ್ಯೋಪಾಧ್ಯಾಯಿನಿ ಪಾರ್ವತಿ, ಉಪಾಧ್ಯಕ್ಷ ಎನ್.ಕೆ. ದೇವಯ್ಯ, ನಿರ್ದೇಶಕರಾದ ಕೆ.ಎಂ.ಸುಬ್ಬಯ್ಯ, ರೋಹಿತ್‍ಕುಶಾಲಪ್ಪ ಉಪಸ್ಥಿತರಿದ್ದರು. ಸಭೆಯಲ್ಲಿ ಕರಿಕೆಯ ವೈದ್ಯರತ್ನ, ಪಾರಂಪರಿಕ ವೈದ್ಯ ಪರಿಷತ್ ರಾಜ್ಯ ಪ್ರಶಸ್ತಿ ವಿಜೇತ ಬೇಕಲ್ ಸೋಮನಾಥ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.

ದೃವ್ಯಗುಣ ತಜ್ಞ ಡಾ. ಸತ್ಯನಾರಾಯಣ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿವೇಕ್, ಡಾ. ಟಿ. ಚೈತ್ರ, ಡಾ. ವಿಜಯಲಕ್ಷ್ಮಿ ಆರೋಗ್ಯ ತಪಾಸಣೆ ನಡೆಸಿದರು. ಸುಮಾರು 21 ಮಂದಿ ಅಯುರ್ವೇದ ಸ್ನಾತಕೋತ್ತರ ವಿಭಾಗದ ತಜ್ಞ ವೈದ್ಯರು ಸಹಕರಿಸಿದರು. ಸ್ವಾಗತ, ನಿರೂಪಣೆ ಕಾರ್ಯಕ್ರಮ ಸಂಯೋಜಕ ಟಿ.ಎಲ್.ಶ್ರೀನಿವಾಸ್ ನಿರೂಪಿಸಿ, ಸ್ವಾಗತಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಗ್ರಾ.ಪಂ.ಸದಸ್ಯೆ, ಸಮಾಜ ಸೇವಕಿ ಪ್ರಭಾ ಮಹೇಶ್ ವಂದಿಸಿದರು.