ಮಡಿಕೇರಿ, ಆ. 17: ಶಾಂತಿ, ಸಹಬಾಳ್ವೆಯ ಕೊಡಗಿನಲ್ಲಿ ಕೋಮು ದ್ವೇಷದ ಘಟನೆಗಳು ಮರುಕಳಿಸುತ್ತಿರುವದರಿಂದ ಜಿಲ್ಲೆಯ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್‍ನ ಅಲ್ಪಸಂಖ್ಯಾತರ ಘಟಕ ಆತಂಕ ವ್ಯಕ್ತಪಡಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್ ಕುಶಾಲನಗರದಲ್ಲಿ ನಡೆದ ಅಹಿತಕರ ಘಟನೆಗಳನ್ನು ಖಂಡಿಸಿದರು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದೆ ಶಾಂತಿಯನ್ನು ಕಾಪಾಡಬೇಕೆಂದು ಮನವಿ ಮಾಡಿದರು. ಕುಶಾಲನಗರದಲ್ಲಿ ಅಮಾಯಕ ಆಟೋ ಚಾಲಕ ಪ್ರವೀಣ್ ಪೂಜಾರಿಯವರ ಹತ್ಯೆ ನಡೆದಿದ್ದು, ಉತ್ತರ ಪ್ರದೇಶದ ಅಮಾಯಕ ವ್ಯಕ್ತಿ ಅಬ್ದುಲ್ ಖುದ್ದೂಸ್ ಅವರಿಗೂ ಕೂಡ ಚಾಕು ಇರಿಯಲಾಗಿದೆ. ಈ ಘಟನೆಗಳು ಅತ್ಯಂತ ಖಂಡನಾರ್ಹವಾಗಿದೆ ಎಂದು ಆರೋಪಿಸಿದ ಅವರು ಎರಡೂ ಪ್ರಕರಣಗಳ ಆರೋಪಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಎಲ್ಲಾ ಜಾತಿ ಮತ ಧರ್ಮ ಬಾಂಧವರು ಸೌಹಾರ್ದತೆಯಿಂದ ಬದುಕು ಸಾಗಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಒಗ್ಗಟ್ಟಿನ ಜೀವನಕ್ಕೆ ಕೋಮು ದ್ವೇಷದ ಕಿಡಿಗಳು ಅಡ್ಡಿ ಆತಂಕವನ್ನು ಸೃಷ್ಟಿಸುತ್ತಿವೆ. ಈ ರೀತಿಯ ಘಟನೆಗಳು ಶಾಂತಿ, ಸಹಬಾಳ್ವೆಯ ಕೊಡಗು ಜಿಲ್ಲೆಯಲ್ಲಿ ಮರುಕಳಿಸುತ್ತಿದ್ದು, ಇದು ಅತ್ಯಂತ ದು:ಖದ ವಿಚಾರವಾಗಿದೆ. ಕುಶಾಲನಗರದಲ್ಲಿ ತಾ. 14 ರಂದು ನಡೆದ ಪಂಜಿನ ಮೆರವಣಿಗೆ ಸಂದರ್ಭ ದುಷ್ಕರ್ಮಿಗಳು ಮಸೀದಿ ಹಾಗೂ ಅಲ್ಪಸಂಖ್ಯಾತರ ಅಂಗಡಿ ಮುಂಗಟ್ಟುಗಳಿಗೆ ಕಲ್ಲು ತೂರಾಟ ಮಾಡಿದ ಘಟನೆ ನಡೆದಿದೆ. ಕೆಲವರು ಧರ್ಮ ನಿಂದನೆ ಹಾಗೂ ವೈಯಕ್ತಿಕ ನಿಂದನೆ ಮಾಡುವ ಮೂಲಕ ಭಾವನೆಗೆ ಧಕ್ಕೆ ತರುವ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದ ಯಾಕೂಬ್ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಾಥಾಗಳು, ಯಾತ್ರೆಗಳು, ಮೆರವಣಿಗೆಗಳನ್ನು ಮಾಡುವದು ಸ್ವಾಗತಾರ್ಹ. ಆದರೆ ಇದನ್ನೇ ನೆಪವಾಗಿ ಮಾಡಿಕೊಂಡು ಇತರ ಧರ್ಮಗಳನ್ನು ನಿಂದಿಸಲು ಅಮಾಯಕ ಯುವಕರನ್ನು ಪ್ರಚೋದಿಸುತ್ತಿರುವದು ಅತ್ಯಂತ ಖಂಡನೀಯವಾಗಿದೆ. ಶಾಂತಿ ಸಹಬಾಳ್ವೆಯ ಕೊಡಗು ಜಿಲ್ಲೆಯಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕಬೇಕೆನ್ನುವದು ನಮ್ಮ ಅಭಿಲಾಷೆಯಾಗಿದೆ. ನೂರಾರು ವರ್ಷಗಳಿಂದ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಬಾಂಧವರು ಆರ್ಥಿಕವಾಗಿ, ಸಾಂಸ್ಕøತಿಕವಾಗಿ, ಸಾಮಾಜಿಕವಾಗಿ ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸುತ್ತಿದ್ದಾರೆ.

ಆದರೆ ಇತ್ತೀಚೆಗೆ ಕೆಲವು ಸಂಘಟನೆಗಳು ಮತ್ತು ಕೆಲವು ವ್ಯಕ್ತಿಗಳು ಅಮಾಯಕ ಯುವಕರನ್ನು ಪ್ರಚೋದಿಸಿ ಕೋಮು ಗಲಭೆ ಸೃಷ್ಟಿಸುವ ಮೂಲಕ ಇತರರ ಸಾವಿನ ಮನೆಯ ಚಂದವನ್ನು ನೋಡಿ ತಮ್ಮ ಲಾಭ ಪಡೆದು ಸಂತೃಪ್ತಿ ಪಡುತ್ತಿದ್ದಾರೆ. ಇದು ಅತ್ಯಂತ ನೋವಿನ ವಿಚಾರವಾಗಿದೆ ಎಂದು ಯಾಕೂಬ್ ಆರೋಪಿಸಿದರು. ಈ ರೀತಿಯ ಬೆಳವಣಿಗೆಯನ್ನು ಕೊಡಗಿನ ಪ್ರಜ್ಞಾವಂತ ನಾಗರಿಕರು ಅರ್ಥ ಮಾಡಿಕೊಂಡು ಕೋಮು ದ್ವೇಷ ಹುಟ್ಟು ಹಾಕುವ ಸಂಘಟನೆಗಳ ವಿರುದ್ಧ ಜಾಗೃತರಾಗಬೇಕಾಗಿದೆ. ಎಲ್ಲಾ ಜಾತಿ ಧರ್ಮದವರು ಎಲ್ಲಾ ಧರ್ಮೀಯರ ಭಾವನೆಗಳಿಗೆ ಪರಸ್ಪರ ಗೌರವವನ್ನು ನೀಡುತ್ತಾ ಮುನ್ನಡೆದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ಹಿರಿಯರು ಪ್ರಯತ್ನಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕುಶಾಲನಗರ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಜನತೆ ಇವರಿಗೆ ಸಹಕಾರ ನೀಡುವ ಅಗತ್ಯವಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಖಾಲಿದ್, ಸಂಘಟನಾ ಕಾರ್ಯದರ್ಶಿ ಮೊಯಿದು ಹಾಗೂ ಪ್ರಮುಖರಾದ ಎಂ.ಎ. ಉಸ್ಮಾನ್ ಉಪಸ್ಥಿತರಿದ್ದರು.