ಸೋಮವಾರಪೇಟೆ, ಸೆ. 22: ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ತಾ. 26 ರಂದು ಪೂರ್ವಾಹ್ನ 11.30ಕ್ಕೆ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜನಾಂಗದ ಸಾಧಕರನ್ನು ಸನ್ಮಾನಿಸಲಾಗುವದು ಎಂದು ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಪ್ರಸ್ತುತ 3,500 ಮಂದಿ ಸದಸ್ಯರಿದ್ದು, ಸೋಮವಾರಪೇಟೆ ತಾಲೂಕಿನಲ್ಲಿಯೇ 3,300 ಮಂದಿ ಸದಸ್ಯತ್ವ ಪಡೆದಿದ್ದಾರೆ. ಉಳಿದಂತೆ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ತಲಾ 100 ಮಂದಿ ಸದಸ್ಯತ್ವ ಪಡೆದಿದ್ದು, ಸದಸ್ಯತ್ವದ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದರು.

ಕೊಡಗಿನಲ್ಲಿ ಒಕ್ಕಲಿಗರ ಸಾಂಸ್ಕøತಿಕ ವೈಭವ, ಜೀವನ ಪದ್ಧತಿಯನ್ನು, ಸಂಸ್ಕøತಿಯನ್ನು ಉಳಿಸಿ ಬೆಳೆಸುವದು, ಯುವ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಗುರಿಯನ್ನು ಸಂಘಟನೆ ಹೊಂದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 2 ಎಕರೆಯಷ್ಟು ಜಾಗ ಖರೀದಿಸಿ ಸಂಘದ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ. ಮುಂದಿನ ವರ್ಷದಿಂದ ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಮಾಹಿತಿ ನೀಡಿದರು.

ತಾ. 26 ರಂದು ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಒಲಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ವಿ.ಆರ್. ರಘುನಾಥ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಪೂರ್ಣಿಮಾ ಗೋಪಾಲ್, ಬಿ.ಜೆ. ದೀಪಕ್ ಅವರುಗಳನ್ನು ಸನ್ಮಾನಿಸಲಾಗುವದು. ಇದೇ ಸಂದರ್ಭ 2016-17ರಿಂದ 2021-22ನೇ ಸಾಲಿಗೆ ನೂತನ ಆಡಳಿತ ಮಂಡಳಿಗೆ ಚುನಾವಣೆಯನ್ನು ನಡೆಸಲಾಗುವದು ಎಂದರು.

ಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಯೋಗೇಂದ್ರ, ನಂದಕುಮಾರ್, ಕೆ.ಎಂ. ಲೋಕೇಶ್, ತಾಕೇರಿ ಪೊನ್ನಪ್ಪ ಅವರುಗಳು ಉಪಸ್ಥಿತರಿದ್ದರು.