ಸುಂಟಿಕೊಪ್ಪ,ನ.14: ಐಗೂರು ಪ್ರಾರ್ಥನಾ ಮಂದಿರದಲ್ಲಿ ಮುಸ್ಲಿಂ ಬಾಂಧವರ ಪವಿತ್ರ ಕುರಾನ್‍ಗೆ ಬೆಂಕಿ ಹಚ್ಚಿರುವ ಪ್ರಕರಣವನ್ನು ಖಂಡಿಸಿ ಸುಂಟಿಕೊಪ್ಪ ವಿವಿಧ ಜಮಾಅತ್‍ಗಳ ಪ್ರಮುಖರು ಹಾಗೂ ಮುಸ್ಲಿಂ ಬಾಂಧವರು ಸೋಮವಾರ ಕನ್ನಡ ವೃತ್ತದಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸುಂಟಿಕೊಪ್ಪದ ಸುನ್ನಿ ಮುಸ್ಲಿಂ ಜಮಯತ್, ಸುನ್ನಿಶಾಫಿ ಜುಮ್ಮ ಮಸೀದಿ, ಗದ್ದೆಹಳ್ಳದ ನೂರಲ್ ಜುಮಾ ಮಸ್ಜೀದ್‍ಗಳ ಪ್ರಮುಖರು ಹಾಗೂ ಮುಸ್ಲಿಂ ಬಾಂಧವರು ಕನ್ನಡ ವೃತ್ತದಲ್ಲಿ ಜಮಾವಣೆಗೊಂಡು ಸಮಾಜದ ನೆಮ್ಮದಿ ಕೆಡಿಸುತ್ತಿರುವ ಕೀಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಧಿಕ್ಕಾರ ಕೂಗಿದರು.

ನಂತರ ಮಾತನಾಡಿದ ಪ್ರಮುಖ ಹಮೀದ್ ಮೌಲವಿ ಮಾತನಾಡಿ, ದೇಶದಲ್ಲಿ ವಿವಿಧ ಜನಾಂಗದ ಜನರು ನೆಲೆಸಿದ್ದರೂ ಎಲ್ಲಾರೂ ಅವರವರ ಧರ್ಮದ ಬಗ್ಗೆ ಗೌರವ ಹಾಗೂ ಶಾಂತಿ ಸೌಹರ್ದತೆಯಿಂದ ಬಾಳುತ್ತಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಕೀಡಿಗೇಡಿಗಳು ಸಮಾಜದ ನೆಮ್ಮದಿಗೆ ಧಕ್ಕೆ ತರುತ್ತಿದ್ದು, ಅಂತಹವರ ವಿರುದ್ಧ ಕ್ರಮ ಜರುಗಿಸುಂತೆ ಒತ್ತಾಯಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎ.ಉಸ್ಮಾನ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂ.ಎ.ವಸಂತ್ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಗೆ ಭಂಗ ತರುವ ಕೆಲಸವನ್ನು ಯಾರೇ ಮಾಡಿದರೂ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯ ಕೆ.ಇ.ಕರೀಂ, ಜಿಲ್ಲಾ ಕಾರ್ಮಿಕ ಮತ್ತು ವಾಹನ ಚಾಲಕರ ಸಂಘದ ಅಧ್ಯಕ್ಷ ಅಣ್ಣಾಶರೀಫ್, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಜಬ್ಬರ್, ಎಸ್.ಡಿ.ಪಿ.ಐ ನಗರ ಕಾರ್ಯದರ್ಶಿ ಇಬ್ರಾಹಿಂ, ಧಾರ್ಮಿಕ ಮೌಲವಿಗಳು ಹಾಗೂ ಮುಸ್ಲಿಂ ಬಾಂಧವರು ಇದ್ದರು.

ಕೃತ್ಯ ಎಸಗಿದ ಆರೋಪಿಗಳ ಪತ್ತೆಗಾಗಿ ಒಂದುವಾರಗಳ ಗಡುವು ನೀಡಿದ್ದು, ಆರೋಪಿಗಳ ಬಂಧನವಾಗದಿದ್ದಲ್ಲಿ ರಸ್ತೆತಡೆದು ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಹಮೀದ್‍ಮೌಲವಿ ತಿಳಿಸಿದರು.