ಸೋಮವಾರಪೇಟೆ, ನ. 20: ಐಗೂರು ಗ್ರಾಮದಲ್ಲಿ ಟಿಪ್ಪು ಜಯಂತಿ ನಂತರ ಜರುಗಿದ ಕುರ್‍ಆನ್ ಸುಟ್ಟ ಪ್ರಕರಣ ಹಾಗೂ ಆರ್‍ಎಸ್‍ಎಸ್ ಮುಖಂಡ ಪದ್ಮನಾಭ ಅವರ ಕಾರು ಸ್ಫ್ಪೋಟಿಸಿದ ಪ್ರಕರಣದ ಸಮಗ್ರ ವರದಿಯನ್ನು ಈಗಾಗಲೇ ಗೃಹ ಸಚಿವರಿಗೆ ನೀಡಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವೈ. ಸಯ್ಯದ್ ಅಹಮ್ಮದ್ ತಿಳಿಸಿದರು. ಐಗೂರು ಗ್ರಾಮದ ಮಸೀದಿಯೊಂದರಲ್ಲಿ ಕುರ್‍ಆನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಐಗೂರಿನಲ್ಲಿ ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳ ಬಗ್ಗೆ ಈಗಾಗಲೇ ಗೃಹ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಕೂಡಲೇ ಎರಡೂ ಪ್ರಕರಣವನ್ನು ಭೇದಿಸಿ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದರು.
ಮುಸಲ್ಮಾನರ ಪವಿತ್ರ ಗ್ರಂಥವಾದ ಕುರ್‍ಆನ್ ಅನ್ನು ಸುಟ್ಟಿದ್ದು ಅಕ್ಷಮ್ಯ ಅಪರಾಧವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು. ಇದೇ ವೇಳೆ ಪ್ರಕರಣವನ್ನು ಅತೀ ಶೀಘ್ರದಲ್ಲಿ ಪೊಲೀಸರು ಭೇದಿಸಬೇಕೆಂದು ಒತ್ತಾಯಿಸಿದರು.
ಐಗೂರು, ಹೊಸತೋಟ ಹಾಗೂ ಸುತ್ತಮುತ್ತಲಿನ ಮುಸಲ್ಮಾನ ಬಾಂಧವರು ಶಾಂತಿಯಿಂದ ವರ್ತಿಸಬೇಕೆಂದು ತಿಳಿಸಿದ ಸಯ್ಯದ್ ಅಹಮದ್, ಪಕ್ಷಬೇಧ ಮರೆತು ಎರಡು ಕೋಮಿನವರು ಸಹೋದರತೆಯಿಂದ ಜೀವನ ಸಾಗಿಸಬೇಕೆಂದು ಮನವಿ ಮಾಡಿದರು.
ಪದ್ಮನಾಭ ಮನೆಗೆ ಭೇಟಿ: ಮಸೀದಿ ಭೇಟಿಗೂ ಮುನ್ನ ಆರ್‍ಎಸ್‍ಎಸ್ ಮುಖಂಡ ಕೆ.ಎಸ್.ಪದ್ಮನಾಭ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭ ಅವರ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ಸೇರಿದಂತೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡುವದಾಗಿ ತಿಳಿಸಿದರು. ಅಲ್ಲದೇ ಅವರ ನಿವಾಸಕ್ಕೆ ಭದ್ರತೆಯನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಟಿಪ್ಪು ಜಯಂತಿಯ ನಂತರ ಜರುಗಿದ ಎರಡೂ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿದರು.
ಈ ಸಂದರ್ಭ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಡಿ.ಕೆ. ಬ್ರಿಜೇಶ್, ಮುಖಂಡರಾದ ಏಜಾಸ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎ.ಯಾಕೂಬ್, ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎ.ಬಿ.ಉಮ್ಮರ್ ಮತ್ತಿತರರು ಹಾಜರಿದ್ದರು.