ಸೋಮವಾರಪೇಟೆ,ಡಿ.6: ಇಲ್ಲಿಗೆ ಸಮೀಪದ ಐಗೂರಿನ ಮಸೀದಿಯಲ್ಲಿದ್ದ ಕುರ್‍ಆನ್ ಹಾಗು ಆರ್‍ಎಸ್‍ಎಸ್ ಮುಖಂಡ ಪದ್ಮನಾಭ ಅವರ ಕಾರಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ಮಂಗಳವಾರದಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಸೀದಿಯನ್ನು ಪ್ರವೇಶಿಸಿದ್ದೂ ಅಲ್ಲದೇ ಮುಸಲ್ಮಾನರ ಪವಿತ್ರ ಧರ್ಮಗ್ರಂಥವಾದ ಕುರ್‍ಆನ್ ಅನ್ನು ಸುಟ್ಟು ಒಂದು ತಿಂಗಳು ಸಮೀಪಿಸುತ್ತಿದ್ದರೂ ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ, ಇದರಿಂದ ಜನಾಂಗ ಬಾಂಧವರಿಗೆ ನೋವಾಗಿದೆ ಎಂದು ಸಿಯಾಬ್ ಸೇರಿದಂತೆ ಹಲವು ಮುಖಂಡರು ಸಚಿವರೊಂದಿಗೆ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಉಸ್ತುವಾರಿ ಸಚಿವರು, ಕುರ್‍ಆನ್ ಹಾಗೂ ಕಾರಿಗೆ ಬೆಂಕಿ ಹಾಕಿದ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಶೀಘ್ರವೇ ಪೊಲೀಸ್ ಇಲಾಖೆ ಬಂಧಿಸಲಿದೆ ಎಂದು ಭರವಸೆ ನೀಡಿದರು. ಎರಡೂ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದ್ದು, ಕೂಡಲೇ ಬಂಧಿಸಲು ಕ್ರಮ ಕೈಗೊಳ್ಳಲಾಗುವದು. ಈ ಸಂಬಂಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಎರಡೂ ಪ್ರಕರಣಗಳು ಅತ್ಯಂತ ಸೂಕ್ಷ್ಮ ವಿಚಾರವಾಗಿರುವ ಹಿನ್ನೆಲೆಯಲ್ಲಿ ಎರಡೂ ಕೋಮಿನವರು ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್, ಕಾರ್ಯದರ್ಶಿ ಲಾರೆನ್ಸ್, ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ.ರಾಯ್, ಉಪಾಧ್ಯಕ್ಷೆ ಶೋಭಾ ಹೊನ್ನಪ್ಪ, ಮುಖಂಡರಾದ ಯಾಕೂಬ್, ಎ.ಬಿ.ಉಮ್ಮರ್, ತಾಪಂ ಸದಸ್ಯ ಬಿ.ಬಿ.ಸತೀಶ್, ಆರ್‍ಎಂಸಿ ಸದಸ್ಯ ಮಚ್ಚಂಡ ಅಶೋಕ್, ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಮತ್ತಿತರು ಇದ್ದರು.
ಇದೇ ವೇಳೆ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಯ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವದಾಗಿ ಭರವಸೆ ನೀಡಿದರು. ಇತರೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಗೊಳ್ಳಲಾಗುವದು ಎಂದರು.
ಐಗೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ. ದಿನೇಶ್ ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಪದ್ಮನಾಭ್ ಮನೆಗೆ ಭೇಟಿ: ನಂತರ ಪದ್ಮನಾಭ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವರು, ಕಾರಿಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ಕೂಡಲೇ ಬಂಧಿಸುವದಾಗಿ ಕುಟುಂಬದವರಿಗೆ ಭರವಸೆ ನೀಡಿದರು.