ಮಡಿಕೇರಿ, ಅ. 26: ಕೇಂದ್ರ ಸರ್ಕಾರ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಮತ್ತು ಸಮಾಜ ನಾಗರಿಕ ಸಂಹಿತೆ ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರೋಧವಾಗಿದೆ ಎಂದು ಆರೋಪಿಸಿ ಕೊಡಗು ಮುಸ್ಲಿಂ ಸಮಾಜ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾ ರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾಜಿ ಶಾಸಕ, ಕೊಡಗು ಮುಸ್ಲಿಂ ಸಮಾಜದ ಅಧ್ಯಕ್ಷ ಕೆ.ಎಂ. ಇಬ್ರಾಹಿಂ ಮಾತನಾಡಿ ತಲಾಖ್ ಹಾಗೂ ಮುಸಲ್ಮಾನರ ವೈಯಕ್ತಿಕ ಕಾನೂನಿನಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸಿ ಅನ್ಯಾಯ ಮಾಡುತ್ತಿದೆ. ಮುಂದೆ ನಡೆಯಲಿರುವ ಉತ್ತರ ಪ್ರದೇಶ ಹಾಗೂ ಇನ್ನಿತರ ರಾಜ್ಯಗಳ ಚುನಾವಣೆಯನ್ನು ಗೆಲ್ಲುವದಕ್ಕಾಗಿ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ಮತೀಯ ಘರ್ಷಣೆಗಳು ಸಂಭವಿಸಿದಾಗ ಮಾತ್ರ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮುಸ್ಲಿಮರ ವೈಯಕ್ತಿಕ ಕಾನೂನು ಶರಿಯತ್ ಮೂಲಕ ಮಾತ್ರ ಸಾಧ್ಯ. ಸಂವಿಧಾನದ ಮೂಲಕ ಅಸಾಧ್ಯ. ಸರ್ಕಾರಗಳು ಅಭಿವೃದ್ಧಿ ಬಗ್ಗೆ ಚಿಂತನೆ ಹರಿಸುವದು ಬಿಟ್ಟು ಮತೀಯ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನ ಹರಿಸುವದು ಸರಿಯಲ್ಲ. ನವೆಂಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವದು ಎಂದರು.

ಸಮಾಜದ ಕಾರ್ಯಾಧ್ಯಕ್ಷ ಪಿ.ಎಂ. ಖಾಸಿಂ ಮಾತನಾಡಿ ಶರಿಯತ್‍ನಲ್ಲಿ ಬದಲಾವಣೆ ಅನಗತ್ಯ. ಇದುವರೆಗೂ ಯಾರೂ ಬದಲಾವಣೆ ಮಾಡಿಲ್ಲ. ಸರ್ಕಾರಕ್ಕೆ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದ ಅವರು ಕಳೆದ ಬಾರಿಯ ಟಿಪ್ಪು ಜಯಂತಿಯ ಸಂದರ್ಭ ನಡೆದ ಗಲಭೆಯ ಹಿನ್ನೆಲೆಯಲ್ಲಿ ಸಮಾಜದ 53 ಮಂದಿಯ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಮೊಕದ್ದಮೆಯನ್ನು ಸರ್ಕಾರ ಹಿಂಪಡೆಯಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಚರ್ಚಿಸಲಾಗುವದು ಎಂದರು.

ಕಾರ್ಯದರ್ಶಿ ಅಮೀನ್ ಮೊಹಿಸಿನ್ ಮಾತನಾಡಿ, ಪ್ರತಿಯೊಂದು ಸಮಾಜದವರಿಗೂ ಅವರದೇ ಆದ ರೀತಿ - ನೀತಿಯಂತೆ ಜೀವಿಸಲು ಅವಕಾಶವಿದೆ. ಏಕರೂಪ ನಾಗರಿಕ ಸಂಹಿತೆ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಸಂವಿಧಾನಕ್ಕೆ ಸವಾಲಾಗಿದೆ. ಮುಸ್ಲಿಂ ಸಮಾಜದ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಒಪ್ಪಲು ಸಾಧ್ಯವಿಲ್ಲ. ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಬರುವವರಿಗೆ ಜಿಲ್ಲಾಡಳಿತ ರಕ್ಷಣೆ ನೀಡಬೇಕು ಎಂದು ಹೇಳಿದರು.

ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಎಸ್‍ಡಿಪಿಐ ಪದಾಧಿಕಾರಿ ಅಫ್ಸರ್, ವಕೀಲ ಕುಂಞ ಅಬ್ದುಲ್ಲ ಹಾಗೂ ಇನ್ನಿತರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಮಾಜದ ಪದಾಧಿಕಾರಿಗಳಾದ ಮನ್ಸೂರ್, ಹನೀಫ್, ಮನ್ಸೂರ್ ಅಲಿ, ಅಬ್ದುಲ್ ಅಡ್ಕಾರ್ ಹಾಗೂ ಇನ್ನಿತರರು ಇದ್ದರು.