ಸಿದ್ದಾಪುರ, ಆ. 30: ಕೊಡಗು ಜಿಲ್ಲಾ ಶ್ರೀ ನಾರಾಯಣ ಗುರು ಧರ್ಮಪರಿಪಾಲನ ಯೋಗಂ (ಎಸ್.ಎನ್.ಡಿ.ಪಿ) ಜಿಲ್ಲಾ ಸಮಿತಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 6 ಮಂದಿ ಆಯ್ಕೆಯಾಗಿದ್ದಾರೆ.ಇಲ್ಲಿನ ಎಸ್.ಎನ್.ಡಿ.ಪಿ ಸಭಾಂಗಣದಲ್ಲಿ ನಡೆದ ಚುನಾವಣೆಯು ತೀವ್ರ ಕುತೂಹಲ ಮೂಡಿಸಿದ್ದು, ಎರಡು ಬಣಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 6 ಸ್ಥಾನಕ್ಕೆ 12 ಮಂದಿ ಸ್ಪರ್ಧಾ ಕಣದಲ್ಲಿದ್ದು, ಒಟ್ಟು 38 ಮತಗಳ ಪೈಕಿ 36 ಮತ ಚಲಾವಣೆಗೊಂಡಿತ್ತು. ಮಾಯಮುಡಿಯ ಟಿ.ಸಿ. ನಾರಾಯಣ 24, ಪೊನ್ನಂಪೇಟೆಯ ಕೆ.ಜಿ. ಪದ್ಮನಾಭ-23, ವೀರಾಜಪೇಟೆಯ ಇ.ಸಿ.ಜೀವನ್ 24, ಕಕ್ಕಟ್ಟುಕಾಡುವಿನ ಪಿ.ಕೆ ಚಂದ್ರನ್-25, ಕರಡಿಗೋಡುವಿನ ಎಂ.ಪಿ. ಶಿವಪ್ರಸಾದ್-24, ಕುಶಾಲನಗರದ ಕೆ.ಎಂ ಶಶಿಧರ್-24 ಮತ ಪಡೆದು ವಿಜಯಶಾಲಿಯಾದರು.

ಈ ಸಂದರ್ಭ ವಿಜೇತ ತಂಡದ ನೇತೃತ್ವ ವಹಿಸಿದ ವಿ.ಕೆ.ಲೊಕೇಶ್ ಮಾತನಾಡಿ, ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಆರು ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜಕ್ಕಾಗಿ ಸೇವೆ ಸಲ್ಲಿಸಲು ಕರೆ ನೀಡಿದರು. ಚುನಾವಣಾ ಫಲಿತಾಂಶದ ಬಳಿಕ ವಿಜೇತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.