ಮಡಿಕೇರಿ, ಸೆ. 7: ಹೆಚ್ಚುತ್ತಿರುವ ಫೇಸ್ ಬುಕ್ ಮತ್ತು ವಾಟ್ಸಪ್ ಹವ್ಯಾಸ ದಿಂದ ಜೀವನ ಬರಡಾಗುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಮೈಸೂರಿನ ಖ್ಯಾತ ಚಾರಣ ಪ್ರೇಮಿ ಮತ್ತು ರೊಟೇರಿಯನ್ ಡಾ|| ದೀಪಕ್ ಸೋಲಂಕಿ ಕರೆ ನೀಡಿದರು.ಅವರು ಇಲ್ಲಿನ ಫಿ|| ಮಾ|| ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ರೋಟರಾಕ್ಟ್ ಕ್ಲಬ್ ಪದಗ್ರಹಣ ಮಾಡಿ ಮಾತನಾಡಿದರು. ರೋಟರಾಕ್ಟ್ ಅಧ್ಯಕ್ಷರಾಗಿ ಅಬ್ದುಲ್ ಕೌಸರ್ ನಿರ್ಗಮಿತ ಅಧ್ಯಕ್ಷ ಶ್ಯಾಮ್ ಕೃಷ್ಣ ಅವರಿಂದ ಅಧಿಕಾರ ವಹಿಸಿಕೊಂಡರು. ಕಾರ್ಯದರ್ಶಿ ಮದನ್ ಗೋಪಾಲ್ ಅವರು ನಿರ್ಗಮಿತ ಅಧ್ಯಕ್ಷೆ ಚೋಂದಮ್ಮ ಅವರಿಂದ ಅಧಿಕಾರ ಸ್ವೀಕರಿಸಿದರು.
ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಮಾತನಾಡಿ, ಸಂಸ್ಥೆಯಲ್ಲಿ ಪದಾಧಿಕಾರಿಗಳಾಗುವದಕ್ಕಿಂತ ನುಡಿಗೆ ತಕ್ಕಂತೆ ನಡೆಯುವದು ಮುಖ್ಯ ಎಂದರು. ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಹಾಗೂ ಇತರರು ಮಾತನಾಡಿದರು. ವೇದಿಕೆಯಲ್ಲಿ ಅಸಿಸ್ಟೆಂಟ್ ಗವರ್ನರ್ ಡಾ|| ಪ್ರಶಾಂತ್ ಹಾಜರಿದ್ದರು. ರೋಟರಾಕ್ಟ್ ಸಂಚಾಲಕ ಡಾ|| ಶ್ರೀಧರ್ ಹೆಗ್ಡೆ ಸ್ವಾಗತಿಸಿದರು.