ಮಡಿಕೇರಿ, ಜು. 21: ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಹೆಸರು ಮಾಡಿದ್ದ ಮಾಜಿ ರಾಜ್ಯಸಭಾ ಸದಸ್ಯ ಫಯಾಜ್ ಮೊಹಮದ್ ಖಾನ್ (82) ಅವರು ಇಂದು ವಿಧಿವಶರಾದರು.ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಧ್ಯಾಹ್ನ ಬಲ್ಯಾಟ್ರಿ ತೋಟದ ಅವರ ಮನೆಯಲ್ಲಿ ನಿಧನರಾದರು.1974ರಿಂದ 1982ರವರೆಗೆ ರಾಜ್ಯಸಭಾ ಸದಸ್ಯರಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಎಫ್.ಎಂ.ಖಾನ್ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಹಾಗೂ ಸಂಜಯ್ ಗಾಂಧಿಗೆ ಆಪ್ತರಾಗಿದ್ದರು. ಅಂದಿನ ರಾಜ್ಯ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಬಲಗೈ ಬಂಟರಂತಿದ್ದರು. ಇಂದಿರಾಗಾಂಧಿ ಚುನಾವಣೆಯಲ್ಲಿ ಸೋಲನ್ನಪ್ಪಿದ್ದ ಸಂದರ್ಭ ಖಾನ್ ಅವರ ಬಲ್ಯಾಟ್ರಿ ತೋಟದ ಮನೆಯಲ್ಲಿ ಬಂದು ಉಳಿದಿದ್ದು ಭಾರೀ ಸುದ್ದಿಯಾಗಿತ್ತು. 1960ರಿಂದಲೇ ರಾಜಕೀಯಕ್ಕೆ ಇಳಿದಿದ್ದ ಅವರು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿ, ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ, ಹಲವು ಕ್ರೀಡಾ ಸಂಸ್ಥೆಗಳಲ್ಲಿ ಸದಸ್ಯರಾಗಿ ತೊಡಗಿಸಿಕೊಂಡಿದ್ದರು. ವರ್ಣಮಯ ರಾಜಕೀಯ ಜೀವನದಿಂದ ನಿವೃತ್ತರಾದಂತಿದ್ದ ಎಫ್.ಎಂ.ಖಾನ್ 1998ರಿಂದೀಚೆ ಬೋಯಿಕೇರಿ ಸಮೀಪದ ಅವರ ಮನೆ ಬಲ್ಯಾಟ್ರಿ ತೋಟದಲ್ಲೇ ವಾಸವಿದ್ದು, ಜಿಲ್ಲಾ ಆಡಳಿತ ಏರ್ಪಡಿಸುವ ಫ್ಲವರ್ ಶೋ ಅನ್ನೂ ನಾಚಿಸುವಂತೆ, ಸಾವಿರಕ್ಕೂ ಅಧಿಕ ತರಹದ ಹೂಗಳ ಪ್ರದರ್ಶನವನ್ನು ಸಾರ್ವಜನಿಕರಿಗೆ ಏರ್ಪಡಿಸುತ್ತಿದ್ದರು.
ಮೃತರು ಮೂವರು ಪುತ್ರಿ ಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಗುಡ್ಡೆಹೊಸೂರು ಬಳಿ ರಸೂಲ್ ಫಾರಂನಲ್ಲಿ ತಾ. 22ರಂದು (ಇಂದು) ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಸಂತಾಪ
ಎಫ್.ಎಂ. ಖಾನ್ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಖಾನ್ ಅವರ ಮನೆಗೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಕೊಡವ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಅಲ್ಪಸಂಖ್ಯಾತ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಜಿಲ್ಲಾ ಪಂಚಾಯಿತಿ ಸದಸ್ಯ ಅಬ್ದುಲ್ ಲತೀಫ್ ಇನ್ನಿತರ ಗಣ್ಯರು ಭೇಟಿ ಕೊಟ್ಟು ಸಂತಾಪ ಸೂಚಿಸಿದರು. ಮಡಿಕೇರಿ ಮೂಡಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಡಿ.ಸಿ.ಸಿ. ಅಧ್ಯಕ್ಷ ಟಿ.ಪಿ. ರಮೇಶ್, ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಮಹಿಳಾ ಘಟಕದ ಅಧ್ಯಕ್ಷೆ ಕುಮುದಾ ಧರ್ಮಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ವಕ್ಫ್ ಸಚಿವ ತನ್ವೀರ್ ಸೇಠ್, ಕೋಲಾರ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವೈ. ಸಯೀದ್ ಅಹ್ಮದ್, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಸ್.ಎ. ಹುಸೇನ್, ಕರ್ನಾಟಕ ಅಲ್ಪಸಂಖ್ಯಾತ ನಿಗಮ ಅಧ್ಯಕ್ಷ ಮಸೂದ್ ಫೌಜಿದಾರ್, ಕೆ.ಪಿ.ಸಿ.ಸಿ. ಮೈಸೂರು ವಲಯ ಅಧ್ಯಕ್ಷ ರಫೀಕ್ ಅಹ್ಮದ್, ಮಾಜಿ ಸಂಸದ ಅಡಗೂರು ಹೆಚ್. ವಿಶ್ವನಾಥ್, ಅವರುಗಳು ಸಂತಾಪ ಸೂಚಿಸಿದ್ದಾರೆ.
ಕೊಡಗು ಫ್ಲೊರಿಕಲ್ಚರ್ ಅಸೋಸಿಯೇಷನ್ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಸುಂಟಿಕೊಪ್ಪ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂ.ಎ.ವಸಂತ, ಸುಂಟಿಕೊಪ್ಪ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಎಸ್.ಬಿ. ಶಂಕರ್, ವಿಎಸ್ಎಸ್ಎನ್ ಬ್ಯಾಂಕ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಕೆದಕಲ್ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ರೈ, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಜಿಲ್ಲಾ ಪಂ. ಸದಸ್ಯೆ ಕುಮುದ ಧರ್ಮಪ್ಪ, ಕಾಂಗ್ರೆಸ್ ನಗರಾಧ್ಯಕ್ಷ ಕೆ.ಇ. ರಫೀಕ್ ಇನ್ನಿತರ ಕಾಂಗ್ರೆಸ್ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಎನ್ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಎಫ್.ಎಂ. ಖಾನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.