ಒಡೆಯನಪುರ, ಜ.7: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ (ಜೆಡಿಎಸ್) ರಾಜ್ಯದಲ್ಲಿ ಅಧಿಕಾರ ನಡೆಸಬೇಕಾದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರ ನಡೆಸಬೇಕು ಎಂದು ಮಾಜಿ ಸಚಿವ ಮತ್ತು ಜೆಡಿಎಸ್ ಹಿರಿಯ ಮುಖಂಡ ಬಿ.ಎ. ಜೀವಿಜಯ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಆರ್‍ಎಂಸಿ) ಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗಳ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರುಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ದುರಾಡಳಿತ ನಡೆಸುತ್ತಿರುವದರಿಂದ ಜನರು ಬೇಸತ್ತಿದ್ದಾರೆ. ಈ ನಿಟ್ಟಿನಲ್ಲಿ ಜಾತ್ಯತೀತ ಜನತಾದಳ ರೈತರ ಕಣ್ಣೀರನ್ನು ಹೊರೆಸುವಂತಹ ಹಾಗೂ ರೈತರ ಪರವಾಗಿರುವ ಏಕೈಕ ಪಕ್ಷವಾಗಿದೆ. ರಾಜ್ಯದಲ್ಲಿ ರೈತರು, ಬಡವರು ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್‍ಪೂವಯ್ಯ ಮಾತನಾಡಿ, ಕಳೆದ ನಾಲ್ಕೂವರೆ ದಶಕಗಳ ರಾಜಕೀಯದ ಹಿನ್ನೆಲೆ ಇರುವ ಪಕ್ಷದ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ಜೀವಿಜಯ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಬಲಗೊಳ್ಳುತ್ತಿದೆ. ಸ್ಥಳೀಯ ಸಮಿತಿಯ ಚುನಾವಣೆಗಳು ವಿಧಾನಸಭೆ ಚುನಾವಣೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಸಂಘಟಿತವಾಗಬೇಕಾಗಿದೆ. ಆರ್‍ಎಂಸಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿ ಅಧಿಕಾರ ನಡೆಸಬೇಕು ಎಂದರು.

ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು ಮಾತನಾಡಿ, ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯಲ್ಲಿ ಜೆಡಿಎಸ್ ಪಕ್ಷ ಮತ್ತಷ್ಟು ಪ್ರಬಲಗೊಳ್ಳುತ್ತಿದೆ, ಈ ನಿಟ್ಟಿನಲ್ಲಿ ಆರ್‍ಎಂಸಿ ಚುನಾವಣೆಯಲ್ಲಿ ಎರಡು ಹೋಬಳಿಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಇಡೀ ಜಿಲ್ಲೆಯಲ್ಲಿ ಸ್ಥಳೀಯ ಸಮಿತಿಯಲ್ಲಿ ಜೆಡಿಎಸ್ ಅಧಿಕಾರ ನಡೆಸುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಜೀವಿಜಯ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಚ್.ಬಿ. ಜಯಮ್ಮ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ವಿಶ್ವ, ಶನಿವಾರಸಂತೆ ಹೋಬಳಿ ಜೆಡಿಎಸ್ ಅಧ್ಯಕ್ಷ ಆದಿಲ್‍ಪಾಷ, ಜೆಡಿಎಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶಶಿ ಸವರ್ಣ, ಪಕ್ಷದ ಪ್ರಮುಖರಾದ ಮುತ್ತೇಗೌಡ, ಎನ್.ಕೆ.ಅಪ್ಪಸ್ವಾಮಿ, ಶನಿವಾರಸಂತೆ ಕೊಡ್ಲಿಪೇಟೆ ಹೋಬಳಿಯ ಆರ್‍ಎಂಸಿ ಅಭ್ಯರ್ಥಿಗಳಾದ ಎಸ್.ಬಿ. ತಮ್ಮಯ್ಯ, ಗಾಯತ್ರಿ ತಮ್ಮಯ್ಯ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.