ಸೋಮವಾರಪೇಟೆ, ಜ.13: ತಾಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಾ. 12ರಂದು ಚುನಾವಣೆ ನಡೆದಿದ್ದು, ತಾ. 14ರಂದು (ಇಂದು) ಮತ ಎಣಿಕೆ ನಡೆಯಲಿದೆ. ತಾಲೂಕಿ ನಲ್ಲಿ ಒಟ್ಟಾರೆ ಶೇ. 43.9ರಷ್ಟು ಮತದಾನ ವಾಗಿದ್ದು, ಇಂದು ಪೂರ್ವಾಹ್ನ 11 ಗಂಟೆಯೊಳಗೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ತಾಲೂಕಿನ 27 ಮತಗಟ್ಟೆಯಲ್ಲಿ ನಡೆದ ಮತದಾನದ ಮತಪತ್ರಗಳನ್ನು ಒಳಗೊಂಡಿರುವ ಮತಪೆಟ್ಟಿಗೆ ಇಲ್ಲಿನ ಜೂನಿಯರ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯಲಿದೆ.

19,506 ಪುರುಷರು ಮತ್ತು 4267 ಮಹಿಳಾ ಮತದಾರರು ಸೇರಿದಂತೆ ಒಟ್ಟು 23,773 ಮಂದಿ ಮತದಾರರಿದ್ದು, 8481 ಮಂದಿ ಪುರುಷರು ಹಾಗೂ 1959 ಮಂದಿ ಮಹಿಳೆಯರು ಸೇರಿದಂತೆ 10440 ಮಂದಿ ಮತದಾನ ಮಾಡಿದ್ದಾರೆ. ಒಟ್ಟು 33 ಮಂದಿ ಕಣದಲ್ಲಿದ್ದು, 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಇಂದು ನಡೆಯಲಿದೆ.