ಗೋಣಿಕೊಪ್ಪಲು, ಜ. 3: ಗೋಣಿಕೊಪ್ಪಲು, ಕುಶಾಲನಗರ ಹಾಗೂ ಮಡಿಕೇರಿ ಎಪಿಎಂಸಿ ಚುನಾವಣೆ ತಾ.12 ರಂದು ನಡೆಯ ಲಿದ್ದು, ಒಟ್ಟು 10 ಮಂದಿ ಜೆಡಿಎಸ್ ಬೆಂಬಲಿತರನ್ನು ಕಣಕ್ಕಿಳಿಸಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ಪೂವಯ್ಯ ತಿಳಿಸಿದ್ದಾರೆ.ಇಂದು ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಬಾಳಾಜಿ ಗ್ರಾಮದಲ್ಲಿ ಬಾಳೆಲೆ ಎಪಿಎಂಸಿ ಕ್ಷೇತ್ರದ ಅಭ್ಯರ್ಥಿ ಎಂ.ಜಿ. ವಿನೀಶ್ ಪರ ಮತಯಾಚನೆ ಸಂದರ್ಭ, ಜಿಲ್ಲೆಯಲ್ಲಿ ಇದೀಗ ತಾನೇ ತಳಮಟ್ಟದಿಂದ ಪಕ್ಷದ ಸಂಘಟನೆ ಕಾರ್ಯ ಕೈಗೊಂಡಿದ್ದು, ಎಲ್ಲ 36 ಸ್ಥಾನಗಳಿಗೂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಜಿಲ್ಲೆಯಲ್ಲಿ ದಶಕಗಳ ಕಾಲದಿಂದ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳು ಸಮಾಜದ ಕಟ್ಟಕಡೆಯ ವ್ಯಕ್ತಿ, ರೈತಾಪಿ ವರ್ಗಕ್ಕೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ವಿಫಲವಾಗಿವೆ. ಜಿಲ್ಲೆಗೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಬಿಡುಗಡೆಗೊಳ್ಳುತ್ತಿರುವ ಕೋಟಿಗಟ್ಟಲೆ ಹಣ ಸದ್ಬಳಕೆಯಾಗದೆ ವಾಪಸ್ಸಾಗುತ್ತಿದೆ. ಕರ್ನಾಟಕದಲ್ಲಿ ಈವರೆಗೆ 1850 ರೈತರ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಕೊಡಗಿನ ತಲ್ತರ ಶೆಟ್ಟಳ್ಳಿ, ಹಾನಗಲ್ ಹಾಗೂ ಶನಿವಾರಸಂತೆಯಲ್ಲಿ ಕೇವಲ 10 ದಿನಗಳಲ್ಲಿ ಮೂರು ರೈತರ ಆತ್ಮಹತ್ಯೆ ಪ್ರಕರಣ ನಡೆದರೂ ಸರ್ಕಾರದ ಸೂಕ್ತ ಸ್ಪಂದನ ಇಲ್ಲ ಎಂದು ಸಂಕೇತ್ ಪೂವಯ್ಯ ಆರೋಪಿಸಿದರು.
ಸರ್ಕಾರ ಹಾಗೂ ಮುಖ್ಯಮಂತ್ರಿ ಗಳಿಂದ ರೈತರ ಕುಟುಂಬಗಳಿಗೆ ಕನಿಷ್ಟ ಸಾಂತ್ವನ, ಪರಿಹಾರ ಇನ್ನೂ ಸಿಕ್ಕಿಲ್ಲ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗುವದು ಖಚಿತವಾಗಿದ್ದು, ರೈತರ ಶೇ.100 ರಷ್ಟು ಸಾಲಮನ್ನಾ ಮಾಡಲಿದ್ದಾರೆ. ರಾಜ್ಯದಲ್ಲಿ ವಿವಿಧ ಬ್ಯಾಂಕುಗಳಿಂದ ಒಟ್ಟು 45 ಸಾವಿರ ಕೋಟಿ ರೈತರಿಗೆ ಸಾಲ ನೀಡಲಾ ಗಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು ರೂ.35,000ಕೋಟಿ ಸಾಲ ನೀಡಿದ್ದು, ಸಹಕಾರಿ ಕ್ಷೇತ್ರದ ಬ್ಯಾಂಕ್ಗಳು ರೂ. 10,000 ಕೋಟಿ ಸಾಲ ನೀಡಿವೆ. ಕೊಡಗಿನಲ್ಲಿ ಇದೀಗ ಬರಗಾಲದ ಛಾಯೆ ಇದ್ದು ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಿಂದ ಜಿಲ್ಲೆಯ ರೈತಾಪಿ ವರ್ಗಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಜಿಲ್ಲೆಯ ಭತ್ತದ ಉತ್ಪಾದನೆಯಿಂದ ಉಂಟಾದ ನಷ್ಟದ ಅಂದಾಜನ್ನು ಕಂದಾಯ ಹಾಗೂ ಕೃಷಿ ಇಲಾಖೆ ಗಳು ಇನ್ನೂ ಸಮರ್ಪಕ ವಾಗಿ ಮಾಡಿಲ್ಲ. ಈ ಬಾರಿ ಜಿಲ್ಲೆಯಲ್ಲಿ ಕಣ್ಣೀರಿನ ಹುತ್ತರಿ ಆಚರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮತಯಾಚನೆ ಮಾಡಿದ ಅವರು ಕೃಷಿಕರಿಗೆ ಕಾಫಿ ಕಣ, ಉಚಿತ ಗ್ರಾಮೀಣ ಗೋದಾಮು ವ್ಯವಸ್ಥೆ, ಗ್ರಾಮೀಣ ಸಂತೆ ಮಾರುಕಟ್ಟೆ ಹಾಗೂ ತೋಟದಲ್ಲಿ ಕೆಲಸ ನಿರ್ವಹಿಸುವ ಸಂದರ್ಭ ದೈಹಿಕ ಹಾನಿ, ಜೀವ ಹಾನಿಯಾದ ಸಂದರ್ಭ ರೈತ ವಿಮಾ ಯೋಜನೆಯ ಮೂಲಕ ಕುಟುಂಬಕ್ಕೆ ನೆರವು ಕಲ್ಪಿಸಲಾಗುವದು.
ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ.ಸಿ. ಬೆಳ್ಳಿಯಪ್ಪ ಅವರು ಮಾತನಾಡಿ, ಗೋಣಿಕೊಪ್ಪಲು ಎಪಿಎಂಸಿ ಚುನಾವಣೆಯಲ್ಲಿ ಈ ಬಾರಿ ಬಾಳೆಲೆ ಕ್ಷೇತ್ರದಿಂದ ಎಂ.ಜಿ. ವಿನೀಶ್ ಅವರು ಸ್ಪರ್ಧಿಸಿದ್ದು, ಎಲ್ಲೆಡೆ ಮತದಾರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ತಾಣಚ್ಚಿರ ಉಮೇಶ್ಗೆ ಬೆಂಬಲ ನೀಡಿದ್ದು ಉತ್ತಮ ಮತಗಳ ಅಂತರದಿಂದ ಗೆಲುವು ಸಾಧಿಸಲಿ ದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಬಾಳೆಲೆ ಕ್ಷೇತ್ರಕ್ಕೆ ಬಾಳೆಲೆ, ದೇವನೂರು, ಮಾಯಮುಡಿ, ಪೆÇನ್ನಪ್ಪಸಂತೆ, ಧನುಗಾಲ, ರುದ್ರಬೀಡು, ಬಾಳಾಜಿ, ನಲ್ಲೂರು, ಬೆಸಗೂರು, ರಾಜಾಪುರ ಮುಂತಾದ ಗ್ರಾಮಗಳು ಒಳಪಟ್ಟಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಉತ್ತಮ ಪೈಪೆÇೀಟಿ ನೀಡುವದಾಗಿ ಅಭ್ಯರ್ಥಿ ವಿನೀಶ್ ತಿಳಿಸಿದರು. ಜಿಲ್ಲಾ ಪ್ರಮುಖರಾದ ಮಚ್ಚಮಾಡ ಮಾಚಯ್ಯ ಇದೇ ಸಂದರ್ಭ ಮಾತನಾಡಿದರು.
ಪ್ರಚಾರ ಕಾರ್ಯ ಸಂದರ್ಭ ಜೆಡಿಎಸ್ ಬಾಳೆಲೆ ಹೋಬಳಿ ಅಧ್ಯಕ್ಷ ಎ.ಐ. ಸುಬ್ಬಯ್ಯ, ಪ್ರಮುಖರಾದ ಎಂ.ಎ. ಅಕ್ಬರ್, ಶಿವನಂಜಪ್ಪ, ಎಂ.ಡಿ. ಭೀಮಯ್ಯ ಮುಂತಾದವರು ಪಾಲ್ಗೊಂಡಿದ್ದರು.