ಸೋಮವಾರಪೇಟೆ, ಜ. 15: ಸೋಮವಾರಪೇಟೆ ತಾಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡಿದ್ದು, 5 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಈ ಫಲಿತಾಂಶ ಮುಂದಿನ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸೋಮವಾರಪೇಟೆ ಭಾಗದಲ್ಲಿ ಜೆಡಿಎಸ್ಗೆ ರೈತರು ಬೆಂಬಲ ನೀಡಿದ್ದಾರೆ. ಮಾಜೀ ಸಚಿವ ಬಿ.ಎ. ಜೀವಿಜಯ ಹಾಗೂ ಪಕ್ಷದ ರಾಷ್ಟ್ರೀಯ ನಾಯಕ ದೇವೇಗೌಡ, ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ನಂಬಿಕೆಯಿಟ್ಟು ರೈತರು ಜೆಡಿಎಸ್ ಬೆಂಬಲಿಸಿದ್ದಾರೆ. ಇದು ಮುಂದಿನ ಎಂಎಲ್ಎ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆದ ಸರ್ಕಾರಗಳು ರೈತಪರ ನಿಲುವು ತಳೆದಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ರೈತರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜಯಗಳಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಪಕ್ಷದ ಮುಖಂಡ ಜೀವಿಜಯ ಅವರು ಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಆರ್ಎಂಸಿ ಚುನಾವಣೆ ಹಿನ್ನೆಲೆ ತಾವು ಸೋಮವಾರಪೇಟೆ ಭಾಗದಲ್ಲಿ ಮತಯಾಚಿಸಿದ ಸಂದರ್ಭ ರೈತಾಪಿ ವರ್ಗದಿಂದ ಜೆಡಿಎಸ್ಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ರೈತ ಸ್ನೇಹಿ ಜೆಡಿಎಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲೂ ಜನತೆ ಆಶೀರ್ವಾದ ಮಾಡಲಿದ್ದಾರೆ. ಕುಮಾರಸ್ವಾಮಿ ಅವರ ಆಡಳಿತಕ್ಕಾಗಿ ರಾಜ್ಯದ ಜನತೆ ಕಾಯುತ್ತಿದ್ದಾರೆ ಎಂದು ಸಂಕೇತ್ ಪೂವಯ್ಯ ಅವರು ಎಪಿಎಂಸಿ ಚುನಾವಣಾ ಫಲಿತಾಂಶದ ಬಗ್ಗೆ ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.