ಕೂಡಿಗೆ, ಅ. 14: ಶಿರಂಗಾಲ ಸರಕಾರಿ ಪದವಿಪೂರ್ವ ಕಾಲೇಜಿನ 2016-17ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ತಾಲೂಕು ಪಂಚಾಯಿತಿ ಸದಸ್ಯ ಎನ್.ಎಸ್. ಜಯಣ್ಣ ಶಾಲಾ ಆವರಣದಲ್ಲಿ ತೆಂಗಿನ ಗಿಡಗಳನ್ನು ನೆಡುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಮೂಲಕ ಸೇವಾ ಮನೋಭಾವನೆಯ ಜೊತೆಗೆ ಗುರುತ್ತರವಾದ ಜವಾಬ್ದಾರಿಯ ಅರಿವು ತಿಳಿಯುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಎನ್ಎಸ್ಎಸ್ ಶಿಬಿರ ತನ್ನ ಬದುಕಿನ ನೈತಿಕ ಅರಿವನ್ನು ಮೂಡಿಸುವ ಜೊತೆಗೆ ನಾಯಕತ್ವದ ಗುಣದ ಸಮಾಜದಲ್ಲಿ ತನ್ನ ಜವಾಬ್ದಾರಿಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ರೀತಿಯ ಎಲ್ಲಾ ವಿಷಯಗಳ ಅರಿವು ಮತ್ತು ಒಂದೆಡೆ ಸೇರುವದರ ಮೂಲಕ ತನ್ನ ಮನಸ್ಸಿನ ವಿಕಸನಕ್ಕೆ ಸಹಕಾರಿಯಾಗುವದು. ಜೊತೆಗೆ ಏಳು ದಿನಗಳ ವಿವಿಧ ಉಪನ್ಯಾಸ ಮಂಡನೆಯ ಅರಿವು ತನ್ನ ಜೀವನದ ದಾರಿಗೆ ಸುಗಮವಾಗಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಪತ್ರಕರ್ತ ಕೆ.ಕೆ. ನಾಗರಾಜ ಶೆಟ್ಟಿ ಮಾತನಾಡಿ, ಎನ್ಎಸ್ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸಮರ್ಪಣ ಮನೋಭಾವ ಬೆಳೆಯುವದು. ಶ್ರಮದಾನದ ಅರಿವು ಹಾಗೂ ಸ್ವಚ್ಛತೆಯ ಬಗ್ಗೆ ತಮ್ಮಲ್ಲಿ ಅಳವಡಿಸಿಕೊಳ್ಳಲು ಸಹಕಾರಿ ಯಾಗುವದು. ಅಲ್ಲದೆ, ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನದ ಸಂಪಾದನೆಗೆ ಇಂತಹ ಶಿಬಿರಗಳು ಉಪಯುಕ್ತವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್ ವಹಿಸಿದ್ದರು. ವೇದಿಕೆಯಲ್ಲಿ ನಲ್ಲೂರು ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ರವಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರವೀಶ್, ಶಿಬಿರಾಧಿಕಾರಿ ಶಿವಕುಮಾರ್, ಸಹ ಶಿಬಿರಾಧಿಕಾರಿ ಎಸ್.ಆರ್. ವೆಂಕಟೇಶ್, ಸೌಜನ್ಯ, ಎಸ್. ಸುಚಿತ್ರ ಇದ್ದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಶಿಬಿರಾರ್ಥಿಗಳು ಪಾಲ್ಗೊಂಡು, ಶಾಲಾ ಆವರಣದಲ್ಲಿ ಶ್ರಮದಾನ ಮಾಡಿ, ಗ್ರಾಮಸ್ಥರಲ್ಲಿ ಸುಚಿತ್ವದ ಬಗ್ಗೆ ಅರಿವು ಮೂಡಿಸಿದರು.