ಪೊನ್ನಂಪೇಟೆ, ಡಿ. 24: ಹಿರಿಯ ರಾಜಕಾರಣಿ, ಕರ್ನಾಟಕದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ವಕೀಲ ಎ.ಕೆ.ಸುಬ್ಬಯ್ಯ ಅವರನ್ನು ಕುವೆಂಪು ಬಂಟಮಲೆ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆ.

ಕೋಮುವಾದದ ವಿರುದ್ಧ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ದುಡಿಯುವ ಹಿರಿಯರೊಬ್ಬರನ್ನು ಗುರುತಿಸಿ ರಾಷ್ಟ್ರಮಟ್ಟದ ಬಂಟಮಲೆ ಪ್ರಶಸ್ತಿಯನ್ನು ನೀಡಲು ಅಕಾಡೆಮಿ ಉದ್ದೇಶಿಸಿದೆ. ಈ ಹಿನೆÀ್ನಲೆಯಲ್ಲಿ ತಮ್ಮ 82ನೇ ಹರೆಯದಲ್ಲೂ ದಣಿವರಿಯದೆ ಹೋರಾಡುತ್ತಿರುವ ಎ.ಕೆ.ಸುಬ್ಬಯ್ಯ ಅವರ ಹೆಸರನ್ನು ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ತಜ್ಞರ ಸಮಿತಿಯಿಂದ ಅಂತಿಮಗೊಳಿಸಲಾಯಿತು ಎಂದು ಅಕಾಡೆಮಿ ಅಧ್ಯಕ್ಷ ಎ.ಕೆ. ಹಿಮಕರ ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಮುಜಾಫರ್ ಅಸ್ಸಾದಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ತಂಬಂಡ ವಿಜಯ್ ಪೂಣಚ್ಚ ಹಾಗೂ ಪ್ರಾಧ್ಯಾಪಕ ಟಿ.ಪಿ. ಆಂಟೋನಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಎ.ಕೆ.ಸುಬ್ಬಯ್ಯ ಅವರನ್ನು ಆಯ್ಕೆ ಮಾಡಿದೆ.

ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ತಾ. 29ರಂದು ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಕಾಡಿನ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಎ.ಕೆ.ಸುಬ್ಬಯ್ಯ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವದು.