ಮಡಿಕೇರಿ ಜ.27 : ದಿಡ್ಡಳ್ಳಿ ನಿರಾಶ್ರಿತರಿಗೆ ಈ ಹಿಂದೆ ಇದ್ದ ಪ್ರದೇಶದಲ್ಲೇ ನಿವೇಶನ ನೀಡಲು ಸಾಧ್ಯವಿಲ್ಲವೆಂದು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಜಿಲ್ಲೆಗೆ ಆಗಮಿಸುವ ಸಂದರ್ಭ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಮೂಲಕ ಕಪ್ಪು ಬಾವುಟ ಪ್ರದರ್ಶಿಸುವದಾಗಿ ಎ.ಕೆ.ಸುಬ್ಬಯ್ಯ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ದಿಡ್ಡಳ್ಳಿ ನಿರಾಶ್ರಿತರಿಗೆ ಅದೇ ಪ್ರದೇಶದಲ್ಲಿ ಕಾನೂನಿನ ಚೌಕಟ್ಟಿನಡಿ ಅವಕಾಶವಿದ್ದರೆ ನಿವೇಶನ ಮಂಜೂರು ಮಾಡುವದಾಗಿ ಭರವಸೆ ನೀಡಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ನಿವೇಶನ ನೀಡಲು ಸಾಧ್ಯವಿಲ್ಲವೆಂದು ಹೇಳುವ ಮೂಲಕ ದೀನ ದಲಿತರ ವಿರೋಧಿಯಂತೆ ವರ್ತಿಸಿದ್ದಾರೆ ಎಂದು ಸುಬ್ಬಯ್ಯ ಆರೋಪಿಸಿದರು.
ದಿಡ್ಡಳ್ಳಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಗೂ ಗೈರು ಹಾಜರಾಗಿದ್ದ ಸಚಿವ ಸೀತಾರಾಮ್ ಈಗಾಗಲೆ ಆಗಿರುವ ನಿರ್ಧಾರಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಬಂಡವಾಳಶಾಹಿಗಳ ಪರವಾಗಿರುವ ಉಸ್ತುವಾರಿ ಸಚಿವರಿಂದಾಗಿ ಕೊಡಗು ನರಳುತ್ತಿದೆ. ಇವರ ಆಪ್ತ ಸಹಾಯಕರಾದ ಹರೀಶ್ ಬೋಪಣ್ಣ ಉಸ್ತುವಾರಿ ಸಚಿವರೋ ಅಥವಾ ಸೀತಾರಾಮ್ ಅವರೋ ಎನ್ನುವ ಪ್ರಶ್ನೆ ಉದ್ಭವಿಸಿದೆ. ಹರೀಶ್ ಬೋಪಣ್ಣ ಅವರ ಕೈಗೊಂಬೆಯಂತೆ ವರ್ತಿಸುತ್ತಿರುವ ಸಚಿವ ಸೀತಾರಾಮ್ ಅವರು ದಿಡ್ಡಳ್ಳಿ ನಿರಾಶ್ರಿತರ ಬಗ್ಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಆದರೆ, ಆದಿವಾಸಿಗಳಿಂದ ಸುಮಾರು 6.10 ಲಕ್ಷ ರೂ. ಹಣ ಪಡೆದ ಅರಣ್ಯ ಸಿಬ್ಬಂದಿಗಳ ವಿರುದ್ಧ ಯಾವದೇ ಕ್ರಮ ಕೈಗೊಳ್ಳಲು ಇವರಿಂದ ಸಾಧ್ಯವಾಗಿಲ್ಲವೆಂದು ಟೀಕಿಸಿದರು.
ಹಣ ಪಡೆದ ಅರಣ್ಯ ಸಿಬ್ಬಂದಿಗಳ ವಿರುದ್ಧ ಎಸಿಬಿಗೆ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ದೂರು ನೀಡಿದ್ದರೂ ಯಾವದೇ ಪ್ರತಿಕ್ರಿಯೆ ನೀಡದೆ ಮುಖ್ಯಮಂತ್ರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದ ಎ.ಕೆ.ಸುಬ್ಬಯ್ಯ, ಉಸ್ತುವಾರಿ ಸಚಿವ ಸೀತಾರಾಮ್ ಅವರು ಜಿಲ್ಲೆಗೆ ಆಗಮಿಸುವ ಸಂದರ್ಭ ಹೋರಾಟ ಸಮಿತಿ ಮೂಲಕ ಕಪ್ಪು ಬಾವುಟ ಪ್ರದರ್ಶನ ಮಾಡುವದಾಗಿ ಎಚ್ಚರಿಕೆ ನೀಡಿದರು.