ಮಡಿಕೇರಿ, ಡಿ. 22: ದಿಡ್ಡಳ್ಳಿ ನಿವಾಸಿಗಳ ಗುಡಿಸಲುಗಳನ್ನು ಜಿಲ್ಲಾಡಳಿತ ನೆಲಸಮಗೊಳಿಸಿದ ಹಿನ್ನೆಲೆಯಲ್ಲಿ ಸೂರು ಕಲ್ಪಿಸುವಂತೆ ಆಗ್ರಹಿಸಿ ಜೆಡಿಎಸ್ 24 ಗಂಟೆಗಳ ಕಾಲ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಗಿದೆ. ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಸೂರು ಕಲ್ಪಿಸುವವರೆಗೆ ಜೆಡಿಎಸ್ ಹೋರಾಟವನ್ನು ಮುಂದುವರೆಸಲಿದೆ ಎಂದು ಹೇಳಿದರು.

ನಗರದ ಗಾಂಧಿ ಮೈದಾನದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಇಂದು ಬೆಳಿಗ್ಗೆ 8 ಗಂಟೆವರೆಗೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ‘ಶಕ್ತಿ’ಯೊಂದಿಗೆ ಮಾತನಾಡಿದ ಸಂಕೇತ್ ಪೂವಯ್ಯ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಮತ್ತೆ ಹೋರಾಟವನ್ನು ತೀವ್ರ ಗೊಳಿಸಲಾಗುವದು. ದಿಡ್ಡಳ್ಳಿ ಹಾಡಿ ನಿವಾಸಿಗಳಿಗೆ ಜೆಡಿಎಸ್ ಸದಾ ಬೆಂಬಲ ನೀಡಲಿದೆ. ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸಂಸತ್ತಿನಲ್ಲಿ ದಿಡ್ಡಳ್ಳಿ ಸಮಸ್ಯೆಯನ್ನು ಪ್ರಸ್ತಾಪಿಸುವ ದಾಗಿ ಭರವಸೆ ನೀಡಿದ್ದಾರೆ. ಪೈಸಾರಿ ಜಾಗದಿಂದ ಒಕ್ಕಲೆಬ್ಬಿಸಬೇಕಾದರೆ ಪರ್ಯಾಯ ಜಾಗ ನೀಡಿ ಒಕ್ಕಲೆಬ್ಬಿಸುವಂತೆ 2005ರಲ್ಲಿಯೇ ಕಾಯಿದೆ ರೂಪಿಸಲಾಗಿದೆ. ಆದರೆ ಇಲ್ಲಿ ಕಾಯಿದೆಯ ಉಲ್ಲಂಘನೆ ಯಾಗಿದೆ ಎಂದು ಹೇಳಿದರು.

ಉಪವಾಸ ಸತ್ಯಾಗ್ರಹದಲ್ಲಿ ಜೆಡಿಎಸ್ ಜಿಲ್ಲಾ ವಕ್ತಾರ ಭರತ್ ಕುಮಾರ್, ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಯೋಗೇಶ್‍ಕುಮಾರ್, ಶನಿವಾರಸಂತೆ ಹೋಬಳಿ ಅಧ್ಯಕ್ಷ ಆದಿಲ್ ಪಾಶ, ಮುಖಂಡ ವೇದಕುಮಾರ್ ಹಾಗೂ ಇನ್ನಿತರರು ಇದ್ದರು.

- ಟಿ.ಜಿ.ಎಸ್.