ಸುಂಟಿಕೊಪ್ಪ, ಜೂ. 15: ತರಗತಿ ಪ್ರಾರಂಭವಾಗಿ 15 ದಿನಗಳು ಕಳೆದಿದ್ದು, ಉಪನ್ಯಾಸಕರು ಕಾಲೇಜಿಗೆ ಬಾರದ ಹಿನ್ನೆಲೆಯಲ್ಲಿ ಗರಗಂದೂರಿನ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜಿನ ದ್ವೀತಿಯ ಪಿಯು ವಿದ್ಯಾರ್ಥಿಗಳು ಕಾಲೇಜು ಪ್ರಾಂಗಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಕಳೆದ 6 ವರ್ಷಗಳಿಂದ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜು ಕೊಡಗಿನಲ್ಲಿ ಆರಂಭಗೊಂಡಿದ್ದು, ಮಡಿಕೇರಿ ಸರಸ್ವತಿ ಡಿಎಡ್ ಕಾಲೇಜಿನ ಕೊಠಡಿಯಲ್ಲಿ ನಡೆಯುತ್ತಿದ್ದ ಈ ಕಾಲೇಜಿಗೆ ಸ್ವಂತ ಕಟ್ಟಡ ಗರಗಂದೂರಿನಲ್ಲಿ ನಿರ್ಮಾಣವಾದ ನಂತರ 2015-16 ರಿಂದ ಇಲ್ಲಿ ಕಾಲೇಜು ಸುವ್ಯವಸ್ಥೆಯಾಗಿ ನಡೆಯುತ್ತಿದೆ.
ಸರಕಾರದ ದ್ವಂದ್ವ ನೀತಿಯಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಕಾಲೇಜಿನ ಎಲ್ಲಾ ಉಪನ್ಯಾಸಕರನ್ನು ಇಲಾಖೆ 2016 ಮೇ 29 ರಂದು ಕರ್ತವ್ಯದಿಂದ ವಜಾ ಮಾಡಿದೆ. 2016ನೇ ಸಾಲಿನಲ್ಲಿ ಶೇ. 93.3 ಫಲಿತಾಂಶ ಲಭ್ಯವಾಗಿದ್ದು ಈ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿದ್ದ 70 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈಗ ದ್ವಿತೀಯ ಪಿಯುಗೆ ತೇರ್ಗಡೆಯಾಗಿದ್ದಾರೆ. ಉಪನ್ಯಾಸಕರಿಲ್ಲದೆ ಇವರ ಭವಿಷ್ಯ ಅತಂತ್ರವಾಗಿದ್ದು ಇಂದು ವಿದ್ಯಾರ್ಥಿಗಳು ಉಪಹಾರ ಸಹ ಸೇವಿಸದೆ ಬೆಳಿಗ್ಗೆ 9 ಗಂಟೆಗೆ ದಿಢೀರನೆ ಕಾಲೇಜಿಗೆ ಬೀಗ ಜಡಿದು ಕಾಲೇಜು ಆವರಣದಲ್ಲಿ ಧರಣಿ ಸತ್ಯಾಗ್ರಹದಲ್ಲಿ ತೊಡಗಿದರು.
ಪ್ರಾಂಶುಪಾಲೆ ಕೆ.ಡಿ. ನೀತಾ ಕಂಪ್ಯೂಟರ್ ಸೈನ್ಸ್, ಗಣಿತ ಹಾಗೂ ಇಂಗ್ಲೀಷ್ ಉಪನ್ಯಾಸಕರು ಬಂದಾಗ ಆಶ್ಚರ್ಯಕಾದಿತ್ತು. ವಿದ್ಯಾರ್ಥಿಗಳು ಕಾಲೇಜಿಗೆ ಬೀಗ ಜಡಿದು ಧರಣಿಗೆ ಕುಳಿತಿರುವದನ್ನು ಕಂಡ ಪ್ರಿನ್ಸಿಪಾಲರು ‘ನಿಮ್ಮ ಪ್ರತಿಭಟನೆಗೆ ಅರ್ಥವಿಲ್ಲ, ಈಗಾಗಲೇ ಸರಕಾರದ ನಿಯಮಾವಳಿ ಪ್ರಕಾರ ನೂತನವಾಗಿ ಇಲಾಖೆ ಬಯೋಲಾಜಿ, ಭೌತಶಾಸ್ತ್ರ, ರಸಾಯಿನಿಕ ಶಾಸ್ತ್ರ ವಿಭಾಗಕ್ಕೂ ಉನ್ಯಾಸಕರನ್ನು ಬೇರೆ ಜಿಲ್ಲೆಯಿಂದ ವರ್ಗಾವಣೆ ಮಾಡಿದೆ. ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರ ಉಪನ್ಯಾಸಕರು ಕರ್ತವ್ಯಕ್ಕೆ ಇನ್ನೂ ಹಾಜರಾಗಿಲ್ಲ, ಅವರಿಗೆ ಸರಕಾರದ ನಿಯಮಾವಳಿ ಪ್ರಕಾರ ವರ್ಗಾವಣೆಗೊಂಡ 15 ದಿನದ ಒಳಗೆ ಕರ್ತವ್ಯಕ್ಕೆ ಹಾಜರಾಗುವ ಅವಕಾಶ ಕಲ್ಪಿಸಲಾಗಿದೆ. ಸೋಮವಾರದೊಳಗೆ ಅವರು ಹಾಜರಾಗಲಿದ್ದಾರೆ ಎಂದು ವಿದ್ಯಾರ್ಥಿಗಳ ಮನ ಒಲಿಸಿದರೂ ವಿದ್ಯಾರ್ಥಿಗಳು ಪಟ್ಟು ಸಡಿಲಿಸಲಿಲ್ಲ
ಆನಂತರ ಪ್ರಾಂಶುಪಾಲರು ಸುಂಟಿಕೊಪ್ಪ ಠಾಣೆಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ ಮೇರೆ ಠಾಣಾಧಿಕಾರಿ ಅನೂಪ್ ಮಾದಪ್ಪ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದರು. ಶಾಂತಿಯುತ ಪ್ರತಿಭಟನೆಗೆ ಸಹಮತ ನೀಡುತ್ತೇವೆ. ಕಾಲೇಜಿಗೆ ಬೀಗ ಜಡಿಯುವದು ಕಾನೂನು ವಿರೋಧ ಅದನ್ನು ಮೊದಲು ತೆರವುಗೊಳಿಸಿ ಎಂದು ಸೂಚಿಸಿದ ಮೇರೆ ಕಾಲೇಜಿನ ಕೊಠಡಿ ಬೀಗ ತೆರೆಯಲಾಯಿತು.
ಪಾಂಶುಪಾಲೆ ನೀತಾ ಅವರು ಠಾಣಾಧಿಕಾರಿಗೆ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ಆನಂತರ ವಿದ್ಯಾರ್ಥಿಗಳಿಗೆ ಚರ್ಚಿಸಲು ಅವಕಾಶ ನೀಡಿದರು. ಸೋಮವಾರದೊಳಗೆ ಉಪನ್ಯಾಸಕರು ಬಾರದಿದ್ದಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಪೊಲೀಸರಿಗೆ ಮನವಿ ನೀಡುವ ಮೂಲಕ ವಿದ್ಯಾರ್ಥಿ ನಾಯಕ ನಿತಿನ್ ಪಾಂಶುಪಾಲರಿಗೆ ಹಾಗೂ ಠಾಣಾಧಿಕಾರಿಗೆ ತಿಳಿಸಿದರು
ಅನಂತರ ವಿದ್ಯಾರ್ಥಿಗಳು ಮುಷ್ಕರವನ್ನು ಹಿಂತೆಗೆದುಕೊಂಡರು.