ಭಾಗಮಂಡಲ, ಅ. 27: ಪ್ರಕೃತಿಯನ್ನು ಆರಾಧಿಸುವದರೊಂದಿಗೆ ಉತ್ತಮ ಪರಿಸರ ನಿರ್ಮಾಣ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ. ವೀರಾಜಪೇಟೆಯ ಶನೇಶ್ವರ ಭಕ್ತ ಮಂಡಳಿಯಿಂದ ತಲಕಾವೇರಿ ತನಕ ಹಮ್ಮಿಕೊಂಡ ನದಿ ಮೂಲ ರಕ್ಷಣೆ ಪರಿಸರ ಉಳಿವು ಕಾಲ್ನಡಿಗೆ ಜಾಥಾ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಪೂರ್ವಜರು ಪ್ರಕೃತಿಯನ್ನು ದೇವರೆಂದು ಪೂಜಿಸಿ ನಂಬುವ ಮೂಲಕ ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ನೆನಪಿಸಿ ಇಂದಿನ ಯುವಪೀಳಿಗೆ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಪ್ರಾಕೃತಿಕ ಸಂಪತ್ತಿನ ಅತಿಯಾದ ಬಳಕೆಯಿಂದ ಅಪಾಯ ಎದುರಾಗುವ ಬಗ್ಗೆ ಸಂಶಯ ವ್ಯಕ್ತಪಡಿಸಿದರಲ್ಲದೆ ನದಿ, ಪರಿಸರವನ್ನು ದುರುಪಯೋಗಪಡಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಆತಂಕ ಎದುರಿಸಬೇಕಾಗುತ್ತದೆ ಎಂದರು.

ಶನೇಶ್ವರ ಭಕ್ತ ಮಂಡಳಿಯ ಅಧ್ಯಕ್ಷರು ಹಾಗೂ ಕಾಲ್ನಡಿಗೆ ಜಾಥಾ ತಂಡದ ಪ್ರಮುಖ ಯುವರಾಜ ಕೃಷ್ಣ ಅವರು ತಮ್ಮ ಜಾಥಾದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಗಳು ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದರು. ಕಳೆದ 3 ದಿನಗಳಿಂದ ವೀರಾಜಪೇಟೆ ಯಿಂದ ಪ್ರಾರಂಭಗೊಂಡ ಕಾಲ್ನಡಿಗೆ ಜಾಥಾ ತಲಕಾವೇರಿ ತಲುಪಿ ಈ ಸಂದರ್ಭ ನದಿ, ತೊರೆಗಳ ಮತ್ತು ಪರಿಸರದ ಉಳಿವು, ಸಂರಕ್ಷಣೆ ಬಗ್ಗೆ ಜನತೆಗೆ ಅರಿವು ಮೂಡಿಸಿರುವದಾಗಿ ತಿಳಿಸಿದರು. ಇದೇ ಸಂದರ್ಭ ಭಾಗಮಂಡಲದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮತ್ತು ತಲಕಾವೇರಿ ಕ್ಷೇತ್ರದಲ್ಲಿ ಮಂಡಳಿಯ ಕಾರ್ಯಕರ್ತರು ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇದೇ ಸಂದರ್ಭ ಶಾಲಾ ಮಕ್ಕಳಿಂದ ಕಾವೇರಿ ನದಿ ರಕ್ಷಿಸಿ ಅಂಚೆಕಾರ್ಡ್ ಚಳುವಳಿಗೆ ಸಹಿ ಸಂಗ್ರಹಿಸುವ ಮೂಲಕ ಮಕ್ಕಳಿಗೆ ನದಿ ಕಲುಷಿಕೆ ಮತ್ತು ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಯಿತು. ಶಾಲೆಯ ಶಿಕ್ಷಕ ವೃಂದ, ಪಾದಯಾತ್ರೆ ತಂಡದ ಸದಸ್ಯರಾದ ಸುಬ್ಬು, ಸಿದ್ದು, ಪುರುಷೋತ್ತಮ್, ಮಂಜಣ್ಣ ಇದ್ದರು.