ನಾಪೋಕ್ಲುನ . 8: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಅಳವಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮ ಜ್ಞಾನದೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಕೊಂಬಂಡ ಗಣೇಶ್ ಹೇಳಿದರು.

ಇಲ್ಲಿನ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ಹಾಗೂ ಸಿ.ವಿ. ರಾಮನ್ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಚಿತ ನೇತ್ರ ಮತ್ತು ದಂತ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಶುಚಿತ್ವ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಲಯನ್ಸ್ ಸಂಸ್ಥೆಯ ಪದಾಧಿಕಾರಿ ಕೊಂಡೀರ ಗಣೇಶ್ ನಾಣಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಲಯನ್ಸ್ ಪದಾಧಿಕಾರಿ ಹಾಗೂ ದಂತ ವೈದ್ಯರೂ ಆಗಿರುವ ಡಾ. ಕೋಟೇರ ಪಂಚಮ್ ತಿಮ್ಮಯ್ಯ, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ನೇತ್ರ ತಜ್ಞ ರಮೇಶ್, ಹಲ್ಲು ಹಾಗೂ ಕಣ್ಣಿನ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ವಿಜ್ಞಾನಿ ಹಾಗೂ ಲಯನ್ಸ್ ಸಂಸ್ಥೆಯ ಹಿರಿಯ ಪದಾಧಿಕಾರಿ ಆಗಿರುವ ಡಾ. ಬೊಪ್ಪಂಡ ಜಾಲಿ ಬೋಪಯ್ಯ, ಅಂಕುರ್ ಪಬ್ಲಿಕ್ ಶಾಲೆಯ ಮುಖ್ಯಸ್ಥೆ ಕೇಟೋಳಿರ ರತ್ನಾ ಚರ್ಮಣ, ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ಬಡ್ಡೀರ ನಳಿನಿ, ಕೊಂಡೀರ ದಮಯಂತಿ ನಾಣಯ್ಯ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಡ್ಡೀರ ನಳಿನಿ ಸ್ವಾಗತಿಸಿ, ಸಹ ಶಿಕ್ಷಕ ಸದಾನಂದ ನಿರೂಪಿಸಿ, ಶಿಕ್ಷಕಿ ಉಷಾರಾಣಿ ವಂದಿಸಿದರು. - ದುಗ್ಗಳ