ಸೋಮವಾರಪೇಟೆ, ನ. 21: ತಾಲೂಕು ವಿಶೇಷಚೇತನರ ಸಂಘದ ವತಿಯಿಂದ ಯಡೂರಿನ ವಿಶೇಷಚೇತನರಾದ ಎಚ್.ಎಸ್. ಉತ್ತಯ್ಯ ಅವರಿಗೆ ತ್ರಿಚಕ್ರ ವಾಹನವನ್ನು ಉಚಿತವಾಗಿ ವಿತರಿಸಲಾಯಿತು.
ಸಂಘದ ಗೌರವ ಅಧ್ಯಕ್ಷ ಬಿ.ಜಿ. ಮಿತ್ರೇಶ್ ಅವರು ತ್ರಿಚಕ್ರ ವಾಹನವನ್ನು ವಿತರಿಸಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ತಾಲೂಕಿನ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕಳೆದ ಎರಡು ವರ್ಷಗಳ ಹಿಂದೆ ಸಂಘವನ್ನು ಆರಂಭಿಸಲಾಗಿದ್ದು ರೂ. 10 ಸಾವಿರ ಮೌಲ್ಯದ ತ್ರಿಚಕ್ರ ವಾಹನವನ್ನು ಉಚಿತವಾಗಿ ನೀಡಲಾಗಿದೆ. ಸಂಘವನ್ನು ಮತ್ತಷ್ಟು ಸದೃಢವಾಗಿ ಬೆಳೆಸಲು ಸರ್ಕಾರ ಹಾಗೂ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಸಂಘದ ತಾಲೂಕು ಅಧ್ಯಕ್ಷ ಬಿ.ಜಿ. ಸಂಗಮೇಶ್ ಮಾತನಾಡಿ, ತಾಲೂಕಿನಾದ್ಯಂತ ನೆಲೆಸಿರುವ ಎಲ್ಲಾ ವಿಕಲಚೇತನ ಬಂಧುಗಳು ಸಂಘದ ಸದಸ್ಯತ್ವವನ್ನು ಪಡೆದುಕೊಂಡು ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಪೌಸ್ತಿನ್ ಡಿಸೋಜ, ನಿರ್ದೇಶಕರಾದ ಸಿ.ಎಸ್. ಮಾದಪ್ಪ, ಪರಮೇಶ್ವರ ಉಪಸ್ಥಿತರಿದ್ದರು.