ಮಡಿಕೇರಿ ಡಿ.27 : ಕೇಂದ್ರ ಸರಕಾರದ ಆರೋಗ್ಯ ಯೋಜನೆ ಗಳನ್ನು ಸದುಪಯೋಗ ಪಡಿಸಿ ಕೊಂಡು ಸ್ವಸ್ಥ ಭಾರತವನ್ನು ನಿರ್ಮಿಸಲು ಎಲ್ಲರೂ ಕೈಜೋಡಿಸ ಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 92ನೇ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ವೀರಾಜಪೇಟೆ ತಾಲೂಕಿನ ಬೊಮ್ಮಾಡು ಗಿರಿಜನ ಕಾಲೋನಿಯಲ್ಲಿ ನಡೆದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ, ರಾಷ್ಟ್ರೀಯ ಬಾಲಸ್ವಸ್ಥ ಕಾರ್ಯಕ್ರಮ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮುಂತಾದ ಅನೇಕ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸ್ವಸ್ಥ ಆರೋಗ್ಯ ಭಾರತವನ್ನು ನಿರ್ಮಾಣ ಮಾಡೋಣವೆಂದು ಕರೆ ನೀಡಿದರು. “ವೈದ್ಯೋ ನಾರಾಯಣೋ ಹರಿ” ಎಂಬಂತೆ ವೈದ್ಯರೊಂದಿಗೆ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವಂತೆ ಕೆ.ಜಿ.ಬೋಪಯ್ಯ ಸಲಹೆ ನೀಡಿದರು.
ಬಿಜೆಪಿಯ ಜಿಲ್ಲಾ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಬಡವರಿಗಾಗಿ ಕೇಂದ್ರ ಸರ್ಕಾರದ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದೆ. ಇದೇ ರೀತಿ ಬಿಜೆಪಿಯ ವಿವಿಧ ಪ್ರಕೋಷ್ಠಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬಹುದೆಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ನವೀನ್ ಕುಮಾರ್ ಅವರು, ದೇಶ ಕಂಡ ಮಹಾನ್ ಮುತ್ಸದ್ಧಿ ವಾಜಪೇಯಿಯಾಗಿದ್ದು, ಅವರ ಜನ್ಮ ದಿನದ ಪ್ರಯುಕ್ತ ಬಡವರಿಗಾಗಿ ಆರೋಗ್ಯ ಶಿಬಿರವನ್ನು ಆಯೋಜಿ¸ Àಲಾಗಿದೆ. ಬಿಜೆಪಿ ಕೇವಲ ನಗರ ಪ್ರದೇಶಕ್ಕೆ ಸೀಮಿತ ವಾಗಿದೆಯೆಂಬ ಪರಿಕಲ್ಪನೆಯನ್ನು ಹೋಗಲಾಡಿಸುವದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಉತ್ತಮವಾಗಿ ಬೆಳೆಯುತ್ತಿದ್ದು, ಅದರ ಒಂದು ಸೇವಾ ಕಾರ್ಯದ ಅಂಗವಾಗಿ ಬೊಮ್ಮಾಡು ಹಾಡಿಯಲ್ಲಿ ಆರೋಗ್ಯ ಶಿಬಿರ ನಡೆಸಲು ನಿರ್ಧರಿಸಲಾಯಿತು ಎಂದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ, ಸಮಾಜದಲ್ಲಿ ಮನುಷ್ಯ ಬಹುಮುಖ್ಯವಾಗಿ ಆರೋಗ್ಯವಂತರಾಗಿ ಬದುಕುವದು, ಪ್ರತಿಯೊಬ್ಬರ ಆರೋಗ್ಯವನ್ನು ನೋಡಿಕೊಳ್ಳುವದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ್ರ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಬಡತನ ರೇಖೆಗಿಂತ ಕೆಳಗಿನವರಿಗೆ ಜಾರಿಗೆ ತಂದಿದೆ. ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮ ಪಡಿಸಿಕೊಂಡರೆ ಪ್ರಧಾನಿ ಮೋದಿಯವರ ಯೋಜನೆಗಳಿಗೆ ಗೌರವ ಸಲ್ಲಿಸಿ ದಂತಾಗುತ್ತದೆ ಎಂದು ಹೇಳಿದರು.
ಬೊಮ್ಮಾಡಿ ಹಾಡಿಯ ಅಧ್ಯಕ್ಷ ಸೋಮಯ್ಯ ಮಾತನಾಡಿ, ಹಾಡಿಯ ಜನರು ಮದ್ಯಪಾನ ಚಟದಿಂದ ಮುಕ್ತರಾದರೆ ಆರೋಗ್ಯವಂತರಾಗ ಬಹುದು ಎಂದು ಅಭಿಪ್ರಾಯಪಟ್ಟರು. ಸರಕಾರ ಮದ್ಯ ಮಾರಾಟವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು. ಹಾಡಿಯ ಜನರು ಅಸ್ವಸ್ಥರಾದರೆ ಆಸ್ಪತ್ರೆಗೆ ಹೋಗಲು ತೊಂದರೆ ಪಡುತ್ತಿದ್ದಾರೆ. ಆದರೆ, ಇಂದು ವೈದ್ಯರೆ ನಮ್ಮ ಬಳಿ ಬಂದಿರುವದು ಸಂತಸ ತಂದಿದೆ ಎಂದರು.
ಶಿಬಿರದಲ್ಲಿ ನುರಿತ ತಜ್ಞರಾದ ಡಾ| ಮಾತಂಡ ಅಯ್ಯಪ್ಪ, ಹೃದಯ ತಜ್ಞ ಡಾ|ಇರ್ಫಾನ್, ಮಕ್ಕಳ ತಜ್ಞ ಡಾ| ನವೀನ್ ಕುಮಾರ್, ಆಯುರ್ವೇದ ತಜ್ಞ ಡಾ| ಉದಯ ಕುಮಾರ್, ಡಾ| ಸಂತೋಷ್, ದಂತ ವೈದ್ಯ ಡಾ|ಧ್ಯಾನ್ ಕುಶಾಲಪ್ಪ ಹಾಗೂ ಸಿಬ್ಬಂದಿ ವರ್ಗ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಅರುಣ್ ಭೀಮಯ್ಯ, ವಿಜು ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯರಾದ ಪ್ರಕಾಶ್, ಕಾಡ್ಯಮಾಡ ಭರತ್, ಅಲ್ಲುಮಾಡ ಪ್ರಕಾಶ್, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಸದಸ್ಯ ಕುಟ್ಟಂಡ ಅಜಿತ್, ಆರೋಗ್ಯ ಭಾರತಿ ಜಿಲ್ಲಾ ಸಂಯೋಜಕ ಶ್ರಿಹರಿ, ಆರೋಗ್ಯ ಭಾರತಿ, ಪದಾಧಿಕಾರಿಗಳಾದ ಶಿವರಾಜು, ಪವನ್ ದಿವಾಕರ್, ಯತೀಶ್, ವಿನೋದ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ರೋಗಿಗಳಿಗೆ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ವಿತರಿಸಲಾಯಿತು. ಇಸಿಜಿ, ರಕ್ತ ಪರೀಕ್ಷೆ, ಮಧುಮೇಹ, ಬಿಪಿ ಪರೀಕ್ಷೆ ಮಾಡಲಾಯಿತು. ಸುಮಾರು 250 ರಿಂದ 300 ಮಂದಿ ಉಚಿತ ಆರೋಗ್ಯ ಶಿಬಿರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡರು.